ಭವ್ಯ ಧ್ವಜಾರೋಹಣಕ್ಕೆ ಸಜ್ಜು: ರಾಮಮಂದಿರ ಆವರಣ ಖಾಲಿ ಮಾಡಲು ಸೂಚನೆ

ಅಯೋಧ್ಯೆ: ನವೆಂಬರ್‌ 25ರಂದು ನಡೆಯಲಿರುವ ಭವ್ಯ ಧ್ವಜಾರೋಹಣ ಸಮಾರಂಭಕ್ಕಾಗಿ ರಾಮಜನ್ಮಭೂಮಿ ದೇವಾಲಯ ಸಂಕೀರ್ಣದಲ್ಲಿ ತೀವ್ರ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಮೇಲೆ ಕೇಸರಿ ಧ್ವಜ ಹಾರಿಸಲಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಲ್ಲಾ ನಿರ್ಮಾಣ ಮತ್ತು ಕಾರ್ಯನಿರ್ವಾಹಕ ಸಂಸ್ಥೆಗಳಿಗೆ ಆವರಣವನ್ನು ಖಾಲಿ ಮಾಡುವಂತೆ ಸೂಚನೆ ನೀಡಿದೆ. ಇದರಿಂದ ದೇವಾಲಯದ ಸೌಂದರ್ಯೀಕರಣ ಮತ್ತು ಅಲಂಕಾರ ಕಾರ್ಯಗಳಿಗೆ ಸಮಯ ಸಿಗಲಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.

ದೇವಾಲಯದ ಅಧಿಕಾರಿಗಳ ಪ್ರಕಾರ, ಈ ವರ್ಷದ ಆಚರಣೆಗಳು ಹಿಂದಿನ ಬಾರಿ ಹೋಲಿಸಿದರೆ ಇನ್ನಷ್ಟು ಭವ್ಯವಾಗಲಿವೆ. ಪ್ರಮುಖ ರಾಮಮಂದಿರದ ಪಕ್ಕದಲ್ಲೇ ಭಗವಾನ್‌ ಮಹಾದೇವ, ಗಣೇಶ, ಹನುಮಾನ್‌, ಸೂರ್ಯದೇವ, ಮಾಭಗವತಿ, ಮಾಅನ್ನಪೂರ್ಣ ಮತ್ತು ಶೇಷಾವತಾರ ದೇವತೆಗಳಿಗೆ ಸಮರ್ಪಿತ ಉಪದೇವಾಲಯಗಳು ನಿರ್ಮಾಣಗೊಂಡಿವೆ. ಕಾಶಿಯ ಖ್ಯಾತ ಪಂಡಿತ ಗಣೇಶ್ವರ ಶಾಸ್ತ್ರಿಯವರ ನೇತೃತ್ವದಲ್ಲಿ ಅಯೋಧ್ಯೆ, ಕಾಶಿ ಮತ್ತು ದಕ್ಷಿಣ ಭಾರತದ 108 ಆಚಾರ್ಯರು ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸಲಿದ್ದಾರೆ.

ಸೂರ್ಯನ ಸಂಕೇತವನ್ನು ಹೊತ್ತ ಕೇಸರಿ ಧ್ವಜವು ಶಕ್ತಿ, ವಿಜಯ ಮತ್ತು ಜ್ಞಾನೋದಯದ ಪ್ರತೀಕವಾಗಿದೆ. ಇದು ಭಗವಾನ್‌ ರಾಮನ ದೈವಿಕ ಪ್ರಕಾಶವನ್ನು ಪ್ರತಿನಿಧಿಸುತ್ತದೆ ಎಂದು ದೇವಾಲಯದ ವಿದ್ವಾಂಸರು ಹೇಳಿದ್ದಾರೆ.

ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಸೋಮವಾರ ಸುದ್ದಿಗಾರರಿಗೆ ಮಾತನಾಡಿ, “ಪ್ರಧಾನಿ ಅವರ ಭೇಟಿಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಅವರು ದೇವಾಲಯ ಆವರಣವನ್ನು ವೀಕ್ಷಿಸಿ ನಡೆಯುತ್ತಿರುವ ನಿರ್ಮಾಣಕಾರ್ಯಗಳನ್ನು ಪರಿಶೀಲಿಸಲಿದ್ದಾರೆ. ಪ್ರಧಾನಿ ಕಚೇರಿಯ ಸಲಹೆಯ ಮೇರೆಗೆ ಅಂತಿಮ ಯೋಜನೆ ರೂಪಿಸಲಾಗುತ್ತದೆ,” ಎಂದರು.

ಮುಖ್ಯ ದೇವಾಲಯದ ನಿರ್ಮಾಣ ಮತ್ತು ಆರು ಉಪದೇವಾಲಯಗಳ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ಹೇಳಿದರು. “ಈಗ ತೋಟಗಳ ಸೌಂದರ್ಯೀಕರಣ ಮತ್ತು ಆವರಣ ವಿನ್ಯಾಸಕ್ಕೆ ಗಮನ ನೀಡಲಾಗುತ್ತಿದೆ,” ಎಂದರು.

ಧ್ವಜಾರೋಹಣದ ತಾಂತ್ರಿಕ ಸಿದ್ಧತೆಗಳನ್ನೂ ನಿಖರವಾಗಿ ಪರಿಶೀಲಿಸಲಾಗುತ್ತಿದೆ. “ಶಿಖರದ ಮೇಲೆ ಧ್ವಜ ಹಾರಿಸಲು ತಾಂತ್ರಿಕ ನೆರವು ಅಗತ್ಯವಿದೆ. ಈ ಕಾರ್ಯದಲ್ಲಿ ರಕ್ಷಣಾ ಸಚಿವಾಲಯದ ತಜ್ಞರು ಸಹಕರಿಸುತ್ತಿದ್ದಾರೆ,” ಎಂದು ಮಿಶ್ರಾ ತಿಳಿಸಿದರು.

ಈ ಸಮಾರಂಭಕ್ಕೆ ದೇಶದಾದ್ಯಂತದ ಗಣ್ಯರು, ಸಂತರು ಮತ್ತು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಅಯೋಧ್ಯೆಯು ಮತ್ತೊಮ್ಮೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಹೊಳೆಯುವ ಕ್ಷಣವನ್ನು ಈ ಕಾರ್ಯಕ್ರಮ ಗುರುತಿಸಲಿದೆ.

Related posts