ಭಾರತಕ್ಕೆ ರಾಷ್ಟ್ರೀಯ ಭಾಷೆಯ ಅಗತ್ಯವಿಲ್ಲ: ಕೆ.ಟಿ. ರಾಮರಾವ್

ಹೈದರಾಬಾದ್: “ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆಯ ಅಗತ್ಯವಿಲ್ಲ” ಎಂಬ ತೀರ್ಮಾನಾತ್ಮಕ ಅಭಿಪ್ರಾಯವನ್ನು ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಅವರು ಭಾನುವಾರ ವ್ಯಕ್ತಪಡಿಸಿದರು. “ನಾನು ನಿಮ್ಮ ಮೇಲೆ ತೆಲುಗು ಹೇರುತ್ತಿಲ್ಲ, ಹಾಗಾದರೆ ನನ್ನ ಮೇಲೆ ಹಿಂದಿ ಹೇರುವುದು ಏಕೆ?” ಎಂದು ಅವರು ಪ್ರಶ್ನಿಸಿದರು.

ಜೈಪುರದಲ್ಲಿ ನಡೆದ ‘ಟಾಕ್ ಜರ್ನಲಿಸಂ’ ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, “ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ಸಂಸ್ಕೃತಿಯ ಗುರುತು. ಭಾರತದಲ್ಲಿ 22 ಅಧಿಕೃತ ಭಾಷೆಗಳೊಂದಿಗೆ 300 ಕ್ಕೂ ಹೆಚ್ಚು ಅನಧಿಕೃತ ಭಾಷೆಗಳಿವೆ. ಈ ವೈವಿಧ್ಯತೆಯೇ ಭಾರತದ ಶಕ್ತಿ” ಎಂದು ಹೇಳಿದ್ದಾರೆ.

“70 ವರ್ಷಗಳಿಂದ ರಾಷ್ಟ್ರೀಯ ಭಾಷೆಯಿಲ್ಲದಿದ್ದರೂ ದೇಶ ಮುನ್ನಡೆದಿದೆ” ಎಂಬುದನ್ನು ಉಲ್ಲೇಖಿಸಿದ ಅವರು, ಈಗ ಬದಲಾವಣೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

“ದಕ್ಷಿಣ ರಾಜ್ಯಗಳ ವೆಚ್ಚದಲ್ಲಿ ಹಿಂದಿ ಹೃದಯಭೂಮಿಯು ಅಧಿಕಾರ ಮತ್ತು ಸಂಪನ್ಮೂಲಗಳ ಕೇಂದ್ರೀಕರಣವನ್ನು ಅನುಭವಿಸುತ್ತಿದೆ. ಇದರಿಂದ ಒಕ್ಕೂಟದ ಚೌಕಟ್ಟಿಗೆ ಧಕ್ಕೆಯಾಗಲಿದೆ” ಎಂದು ಕೆಟಿಆರ್ ಎಚ್ಚರಿಸಿದರು.

“ಸಂಸತ್ತಿನಲ್ಲಿ ಪ್ರತಿನಿಧಿಯನ್ನೆಂದರೆ ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಬಾರದು. ಶಿಸ್ತಿನಿಂದ ಜನಸಂಖ್ಯೆಯನ್ನು ನಿಯಂತ್ರಿಸಿರುವ ದಕ್ಷಿಣ ರಾಜ್ಯಗಳನ್ನು ಶಿಕ್ಷಿಸುವಂತಾಗಬಾರದು” ಎಂದು ಅವರು ಒತ್ತಿ ಹೇಳಿದರು. “ಕೇರಳ 1950ರಿಂದ ಕೇವಲ ಶೇ. 69ರಷ್ಟು ಜನಸಂಖ್ಯಾ ಏರಿಕೆಯನ್ನು ಕಂಡರೆ, ಉತ್ತರ ಪ್ರದೇಶದಲ್ಲಿ ಶೇ. 239ರಷ್ಟು ಏರಿಕೆಯಾಗಿದೆ” ಎಂದು ವಿವರಿಸಿದರು.

ಈ ಅಸಮತೋಲನ, ಕ್ಷೇತ್ರ ವಿಂಗಡನೆಯ (Delimitation) ಪ್ರಸ್ತಾವನೆ ಮೂಲಕ ರಾಜಕೀಯ ಅಸಮತೋಲನಕ್ಕೆ ಕಾರಣವಾಗಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು. “ಜನಸಂಖ್ಯೆ ಆಧಾರವಲ್ಲದೇ ನೀತಿಗಳು ಮತ್ತು ಸಂಪನ್ಮೂಲ ಹಂಚಿಕೆಯಲ್ಲೂ ಸಮತೋಲನ ಇರಬೇಕು” ಎಂದು ಅಭಿಪ್ರಾಯಪಟ್ಟರು.

Related posts