ಭಾರತೀಯತೆಯನ್ನು ಶ್ರೇಷ್ಠ ಎನ್ನಲು ಯಾವತ್ತಾದರೂ ಸಿದ್ಧರಿದ್ದಾರ?; ಸಿ.ಟಿ.ರವಿ

ಬೆಂಗಳೂರು: ಮೆಕಾಲೆ, ಕಾರ್ಲ್ ಮಾಕ್ರ್ಸ್ ಗರಡಿಯವರಿಗೆ ಭಾರತದ ಹಿರಿಮೆ ಗರಿಮೆಯನ್ನು ಕಲಿಸುವುದು ಅಪಥ್ಯವಾಗಿ ಕಾಣುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೆಕಾಲೆಗೆ ಭಾರತ ತಲೆಯೆತ್ತಿ ನಿಲ್ಲಬೇಕೆಂದು ಯಾವತ್ತಾದರೂ ಅನಿಸಿತ್ತೇ? ಭಾರತವು ಸದಾ ಗುಲಾಮಗಿರಿಯಲ್ಲಿ ಇರಬೇಕೆಂಬ ಚಿಂತನೆ ಮೆಕಾಲೆಯದಾಗಿತ್ತು. ಅದಕ್ಕಾಗಿ ಇಲ್ಲಿ ದಾಸ್ಯವನ್ನು ಒಪ್ಪಿಕೊಳ್ಳುವ ಜನರನ್ನು ತಯಾರಿಸುವ ಯೋಚನೆ ಮೆಕಾಲೆಯದಾಗಿತ್ತು ಎಂದು ವಿಶ್ಲೇಷಿಸಿದರು.

ಕುಟುಂಬ, ಸಮಾಜ, ರಾಜ್ಯದ ವ್ಯವಸ್ಥೆ ಇರಬಾರದೆಂಬ ಚಿಂತನೆ ಕಾರ್ಲ್ ಮಾಕ್ರ್ಸ್‍ನದಾಗಿತ್ತು. ಕಾರ್ಲ್ ಮಾಕ್ರ್ಸ್ ಚಿಂತನೆ ಮತ್ತು ಮೆಕಾಲೆ ಚಿಂತನೆಯಲ್ಲಿ ಗರಡಿಯಲ್ಲಿ ತಯಾರಾದ ಜನರು ಭಾರತೀಯತೆಯನ್ನು ಶ್ರೇಷ್ಠ ಎನ್ನಲು ಯಾವತ್ತಾದರೂ ಸಿದ್ಧರಿದ್ದಾರಾ ಎಂದು ಅವರು ಪ್ರಶ್ನಿಸಿದರು.

ನಮ್ಮ ದೇಶವನ್ನು ಲೂಟಿ ಹೊಡೆದ ಮತ್ತು ದಾಳಿ ಮಾಡಿದ ಅಲೆಕ್ಸಾಂಡರ್ ಗ್ರೇಟ್ ಎಂದು ಕಲಿಸಲಾಗುತ್ತಿದೆ. ನಮ್ಮ ಸಂಸ್ಕøತಿ ನಾಶ ಮಾಡಿದವರು, ನಮ್ಮ ತಾಯಂದಿರ ಶೀಲ ಕೆಡಿಸಲು ಮುಂದಾದವರು, ಅಂಥವರನ್ನು ಗ್ರೇಟ್ ಅಂತ ಸ್ವತಂತ್ರ ಭಾರತ ಇತಿಹಾಸದಲ್ಲಿ ನಾವು ಹೇಳಿಕೊಳ್ಳುವುದು ದೇಶಕ್ಕೇ ಅಪಮಾನ ಎಂದು ನುಡಿದರು.

ದೇಶದಲ್ಲಿ ಸಾಧನೆ ಮಾಡಿದವರು ಯಾರೂ ಇಲ್ಲವೇ? ಆರ್ಯಭಟ ಎಲ್ಲಿಯವರು? ಚಾಣಕ್ಯ, ಅಶೋಕ ಚಕ್ರವರ್ತಿ, ರಾಜರಾಜ ಚೋಳ ಎಲ್ಲಿಯವರು? ನಾವು ಇತಿಹಾಸದಲ್ಲಿ ಹಿಂದೆ ಚೋಳರು ಇಂಡೋನೇಶ್ಯಾ- ಕಾಂಬೋಡಿಯ ವರೆಗೆ ಭಾರತವನ್ನು ವಿಸ್ತರಿಸಿದ್ದರು ಎಂದು ಕಲಿಸಿದ್ದೇವಾ? ಎಂದು ಅವರು ಪ್ರಶ್ನೆಗಳ ಸುರಿಮಳೆಗೈದರು.

ಅಶೋಕನ ಸಾಮ್ರಾಜ್ಯ ಅವತ್ತಿನ ಇರಾನ್, ಪರ್ಶಿಯವನ್ನು ದಾಟಿ ಹೋಗಿತ್ತು ಎಂದು ನಮ್ಮ ಮಕ್ಕಳಿಗೆ ಹೇಳಿ ಕೊಟ್ಟಿದ್ದೇವಾ? ನಾವು ಕಲಿಸಿದ್ದು ಅಲೆಕ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಎಂದಲ್ಲವೇ? ಇವರೆಲ್ಲರೂ ಯಾರು? ಕಾರ್ಲ್ ಮಾಕ್ರ್ಸ್ ಚಿಂತನೆ ಮತ್ತು ಮೆಕಾಲೆ ಗರಡಿಯಲ್ಲಿ ತಯಾರಾದ ಜನರಿಗೆ ಭಾರತೀಯತೆಯನ್ನು ಹೇಳುವ ಹಾಗೂ ಭಾರತದ ಹಿರಿಮೆ ಗರಿಮೆಗಳನ್ನು ಹೇಳುವುದು ಅಪಥ್ಯವಾಗಿ ಕಾಣುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆ ಜನರು ಇವತ್ತು ಸಿದ್ದರಾಮಯ್ಯನವರಿಗೆ ಪದೇಪದೇ ಕಿವಿ ಊದುತ್ತಾರೆ. ಭಾರತ ಮೇಲೆದ್ದು ನಿಲ್ಲಲು ಭಾರತೀಯತೆಯ ಶ್ರೇಷ್ಠತೆಯನ್ನು ತಿಳಿಸುವ ಕೆಲಸ ಆಗಬೇಕು. ಇಲ್ಲಿನ ಸಾಮಾನ್ಯ ಜನರು ದೇಶಕ್ಕಾಗಿ ಸಮರ್ಪಣೆ ಮಾಡಿದ್ದನ್ನು ಜನರಿಗೆ ತಿಳಿಸಬೇಕು. ವಿಜ್ಞಾನ- ತಂತ್ರಜ್ಞಾನದಲ್ಲಿ ನಾವೆಷ್ಟು ಮುಂದಿದ್ದೆವು ಎನ್ನುವುದನ್ನು ಹೇಳಿಕೊಟ್ಟರೆ ಭಾರತ ಎದ್ದು ನಿಲ್ಲುತ್ತದೆ. ಅವರಿಗೆ ಭಾರತೀಯತೆಯ ಜಾಗೃತಿ ಬೇಕಿಲ್ಲ. ಅದಕ್ಕಾಗಿ ಆ ಜನರು ಪಠ್ಯಪುಸ್ತಕವನ್ನು ನೆಪ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಕಾರ್ಲ್ ಮಾಕ್ರ್ಸ್ ಮತ್ತು ಮೆಕಾಲೆ ಗರಡಿಯಲ್ಲಿ ಪಳಗಿದವರು, ಗುಂಡು, ತುಂಡು ಕೈಲಿದ್ದರೆ, ಸಿಗರೇಟಿದ್ದರೆ ಮಾತ್ರ ಬುದ್ಧಿ ಓಡುವ ಜನರಷ್ಟೇ ತಜ್ಞರೇ? ಅವರಷ್ಟೇ ಬುದ್ಧಿಜೀವಿಗಳೇ ಎಂದು ಕೇಳಿದ ಅವರು, ಸಂಸತ್ ನಮ್ಮ ಪ್ರಜಾಪ್ರಭುತ್ವದ ದೇಗುಲ. ಇವತ್ತಿನ ಕಾಲದ ಅವಶ್ಯಕತೆಗೆ ಅನುಗುಣವಾಗಿ ಹೊಸ ಸಂಸತ್ ಕಟ್ಟಡ ನಿರ್ಮಾಣವಾಗಿದೆ. ಅದರ ಕುರಿತು ಟೀಕೆ ಸಲ್ಲದು ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ಸಿನ ಮಾನಸಿಕತೆಯ ಕುರಿತು ಆಕ್ಷೇಪ ಸೂಚಿಸಿದ ಅವರು, ಪಾಂಡವರು ವೈಭವದ ಇಂದ್ರಪಸ್ಥ ನಿರ್ಮಿಸುತ್ತಾರೆ. ಅದನ್ನು ನೋಡಿ ಸಂತಸ ಪಡುವ ಬದಲು ಧುರ್ಯೋದನಾದಿ ಕೌರವರಿಗೆ ಸಂಕಟ ಶುರುವಾಗುತ್ತದೆ. ಈ ಭವ್ಯ ಸಂಸತ್ತನ್ನು ನೋಡಿ ಕಾಂಗ್ರೆಸ್ಸಿಗರಿಗೆ ಮತ್ತು ವಿರೋಧ ಪಕ್ಷಗಳಿಗೆ ಸಂಕಟ ಆರಂಭವಾಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಬಿಜೆಪಿ, ಮೋದಿಯವರು ಹೊಸ ಸಂಸತ್ ನಿರ್ಮಿಸಿದ್ದಾರೆ ಎಂಬುದೇ ಅವರಿಗೆ ಸಂಕಟ. ಅದಕ್ಕಾಗಿ ಅವರ ವಿರೋಧ. ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ನಿಜವಾದ ಕಾಳಜಿ ಇದ್ದರೆ ಅವರ ಎದುರು ಯಶವಂತ ಸಿನ್ಹರನ್ನು ನಿಲ್ಲಿಸುವ ಅವಶ್ಯಕತೆ ಇರಲಿಲ್ಲ ಎಂದು ನುಡಿದರು. ಅವಿರೋಧ ಆಯ್ಕೆ ಮಾಡಬಹುದಿತ್ತು. ಅವರನ್ನು ರಾಷ್ಟ್ರಪತ್ನಿ ಎಂದು ಕರೆದು ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು. ಸಂಸತ್ ನಿರ್ಮಾಣಕ್ಕೆ ವಿಳಂಬ, ಮೊತ್ತ ಹೆಚ್ಚಳ, ಲೂಟಿ ಹೊಡೆಯಲು ಅವಕಾಶ ಆಗಲಿಲ್ಲ ಎಂದು ಈ ಟೀಕೆ ಮಾಡುತ್ತಿದ್ದಾರೆ ಎಂದು ನುಡಿದರು.
ಭಾರತದಿಂದ ಹೊರಕ್ಕೆ ಹೋದರೂ ರಾಹುಲ್ ಗಾಂಧಿಯವರ ಮೋದಿ ದ್ವೇಷ ಬಿಟ್ಟಿಲ್ಲ ಎಂದ ಅವರು, ಅವರಲ್ಲಿ ವಿಷ ಇದೆ; ಅದನ್ನೇ ಕಾರುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ದೇಶದ ಜನರು ಮೋದಿಯವರ ಬಡವರ ಕಲ್ಯಾಣ, ಕಿಸಾನ್ ಸಮ್ಮಾನ್, ಆಯುಷ್ಮಾನ್, ಮುದ್ರಾದಂಥ ಜನಪರ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಇದ್ದುದು ಕೇವಲ ಹಗರಣಗಳಷ್ಟೇ ಎಂದು ವಿವರಿಸಿದರು.

ಗ್ಯಾರಂಟಿ ವಿಚಾರದಲ್ಲಿ ಕಾದು ನೋಡುತ್ತೇನೆ; ಯಾವ ರೀತಿ, ಎಷ್ಟು ಜನರಿಗೆ ಕೊಡುತ್ತಾರೆ ಎಂಬುದರ ಆಧಾರದಲ್ಲಿ ಸಮಾಜ ಪ್ರತಿಕ್ರಿಯೆ ಕೊಡಲಿದೆ. ನಾವೇನೂ ಪ್ರತಿಕ್ರಿಯೆ ಕೊಡಬೇಕಿಲ್ಲ ಎಂದು ಅವರು ತಿಳಿಸಿದರು. ನಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ದೇಶದ ಗೆಲುವಿನ ಓಟ ಮುಂದುವರಿಯಲಿದೆ ಎಂದು ತಿಳಿಸಿದರು.

Related posts