ಬೆಂಗಳೂರು: ಲಿಂಗಾಯತ ಪಂಚಮಸಾಲಿ ಮಲೆಗೌಡ ದೀಕ್ಷಾ ಲಿಂಗಾಯತ ಗೌಡ ಹಾಗೂ ಲಿಂಗಾಯತ ಎಲ್ಲಾ ಉಪಸಮಾಜಗಳಿಗೆ ಮೀಸಲಾತಿ ನ್ಯಾಯಕ್ಕಾಗಿ ಮಾತುಕತೆ ಮಾಡುವಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕಾನೂನು ತಜ್ಞರ ಸಮಾಲೋಚನೆ ಸಭೆ ನಡೆಸಿದ ಶ್ರೀಗಳು ಸಮಾಜಕ್ಕೆ ಮೀಸಲಾತಿ ಸಿಗಬೇಕಾಗಿರುವ ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಸಿದರು. ಈ ಸಭೆಯಲ್ಲಿ ನಡೆದ ಚರ್ಚೆ ಹಾಗೂ ತೀರ್ಮಾನ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಒಂದು ಹಂತಕ್ಕೆ ತಲುಪಿದೆ. ಮುಂದಿನ ಹೋರಾಟ ಸಂಬಂಧ ಲೀಗಲ್ ಸೆಲ್ ಹಾಗೂ ಕಾನೂನು ತಜ್ಞರ ಜೊತೆಗೆ ಸಭೆ ನಡೆಸಿದ್ದೇವೆ ಎಂದರು.
ಪಂಚಮಸಾಲಿ ಮೀಸಲಾತಿ ವಿಚಾರ ಹೈಕೋರ್ಟ್‌ನಲ್ಲಿ ಹಾಗೂ ಸುಪ್ರೀಂಕೋರ್ಟ್‌ನಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರ ಇದ್ದವರು. ಹಾಗಾಗಿ ನಮ್ಮ ಸಮುದಾಯದ ಬೇಡಿಕೆ ಈಡೇರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಮೀಸಲಾತಿ ವಿಚಾರದಲ್ಲಿ ಕಾನೂನು ತೊಡಕಿದ್ದು, ಕಾನೂನಾತ್ಮಕವಾಗಿಯೇ ಸರ್ಕಾರ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಬೇಕು. ತಮ್ಮ ಸರ್ಕಾರದ ಅವಧಿಯಲ್ಲೇ ಸಮಸ್ಯೆ ಇತ್ಯರ್ಥಗೊಳಿಸಿ, ನಮಗೆ ಮೀಸಲಾತಿ ಕೊಡಿಸಬೇಕು. ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಾಗೂ ಎಲ್ಲಾ ಲಿಂಗಾಯತ ಒಳಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕ್ರಮವಹಿಸಬೇಕು ಎಂದ ಶ್ರೀಗಳು, ನೆಮ್ಮಲ್ಲ ಹಕ್ಕೊತ್ತಾಯ ಸಂಬಂಧ ಸರ್ಕಾರ ತಕ್ಷಣವೇ ಆಡಳಿತಾತ್ಮಕ ಸಭೆ ಕರೆಯಬೇಕು ಎಂದು ಸಿಎಂ, ಡಿಸಿಎಂ ಅವರನ್ನು ಆಗ್ರಹಿಸಿದರು.
ಈಗಾಗಲೇ ಸಿಎಂ ಸಿದ್ದರಾಮಯ್ಯ ಎಸ್‌ಸಿ ಎಸ್‌ಟಿ, ಒಬಿಸಿ ಮುಖಂಡರನ್ನು ಆಹ್ವಾನಿಸಿ ಸಭೆ ನಡೆಸಿದ್ದಾರೆ. ಅದರಂತೆ ನಮ್ಮನ್ನೂ ಆಹ್ವಾನಿಸಿ ಮೀಸಲಾತಿ ಸಂಬಂಧ ಮುಕ್ತ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿದ ಶ್ರೀಗಳು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಕೋರಿದ್ವಿ, ಹಿಂದಿನ ಸರ್ಕಾರ 2 ಡಿ ಕೊಟ್ಟಿತು. ಈ ಎರಡೂ ಮೀಸಲಾತಿ ವಿಚಾರಗಳೀಗ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನಲ್ಲಿವೆ. ಹೀಗಾಗಿ ಪಂಚಮಸಾಲಿ ಸಮಾಜ ಮೊದಲಿದ್ದ ಮೀಸಲಾತಿಯಲ್ಲೇ ಇದೆ. ಸಮಯ ನೀಡಿದ ಬಳಿಕ ನಮ್ಮ ಹೋರಾಟ ಸಮಿತಿಯ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಆದಷ್ಟು ಬೇಗ ಸಮಯ ನೀಡಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು
ಈ ಸಂದರ್ಭದಲ್ಲಿ ವಕೀಲರಾದ ಎಂ.ಬಿ. ಜಿರಲೇ , ಸುಲ್ತಾನಿಪುರ , ಜಿಲ್ಲಾ ಅಧ್ಯಕ್ಷರಾದ ಆರ್ ಕೆ ಪಾಟೀಲ , ಕಾನೂನು ಘಟಕದ ಜಿಲ್ಲಾ ಅಧ್ಯಕ್ಷರಾದ ರಾಜನಗೌಡ ಪಾಟೀಲ್ , ಪ್ರಧಾನ ಕಾರ್ಯದರ್ಶಿ ಶಿವಪುತ್ರ , ಜಿಲ್ಲಾ ಯುವ ಅಧ್ಯಕ್ಷ ಗುಂಡು ಪಾಟೀಲ್ , ರಾಜ್ಯ ವಿಭಾಗದ ದಾವಣಗೆರೆ ಸಿದ್ಧನಗೌಡ ಪಾಟೀಲ್ , ಧಾರವಾಡದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ , ಪ್ರಕಾಶ ಭಾವಿಕಟ್ಟಿ , ಜಗದೀಶ್ ಬಿರಾದರ್ , ಧಾರವಾಡ ಜಿಲ್ಲಾ ಪಂಚಮಸಾಲಿ ಅಧ್ಯಕ್ಷ ನಿಂಗನ್ನ ಕರಿಕಟ್ಟೆ , ಬೆಳಗಾವಿ ನಗರ ಅಧ್ಯಕ್ಷ ರಾಜು ಮುಗ್ದಮ್ ಮೊದಲಾದವರು ಉಪಸ್ಥಿತರಿದ್ದರು.