ಬಾಗಲಕೋಟೆ: ಪ್ರಸಕ್ತ ಹಂಗಾಮಿಗೆ ಉತ್ತಮ ಬೆಲೆ ನೀಡಬೇಕೆಂದು ಮುಧೋಳದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ರೈತ ಸಂಘಟನೆಗಳ ಪ್ರತಿಭಟನೆ ಇಂದು ಮಹತ್ವದ ತಿರುವು ಪಡೆದುಕೊಂಡಿದೆ. ರೈತ ಸಂಘಟನೆಗಳ ವಿರುದ್ಧ ಕಬ್ಬು ಬೆಳೆಗಾರರೇ ಕಾರ್ಖಾನೆಗಳನ್ನು ಬೇಗ ಪ್ರಾರಂಭಿಸಲು ಮತ್ತು ತಮ್ಮ ಕಬ್ಬು ತುಂಬಿದ ವಾಹನಗಳಿಗೆ ಸೂಕ್ತ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆಗೆ ಇಂದು ಮುಧೋಳ ಸಾಕ್ಷಿಯಾಯಿತು.
ಬೆಳೆದ ಕಬ್ಬನ್ನು ಕಾರ್ಖಾನೆಗೆ ಸಾಗಿಸುವ ಧಾವಂತದಲ್ಲಿರು ಅಮಾಯಕ ರೈತನ ಸಹನೆಯ ಕಟ್ಟೆಯೊಡಿದಿದ್ದನ್ನು ಇಂದು ಮುಧೋಳದಲ್ಲಿ ಕಾಣಬಹುದಿತ್ತು. ಆಕ್ರೋಶಗೊಂಡ ರೈತರು ತಮ್ಮ ಕಬ್ಬು ಕಾರ್ಖಾನೆಗೆ ಸಾಗಿಸಲು ಸಾಧ್ಯವಾಗದ ಅಸಹಾಯಕತೆಯನ್ನು ಪೋಲೀಸ್ ವರೀಷ್ಠಾಧಿಕಾರಿಗಳನ್ನು ತೋಡಿಕೊಳ್ಳುತ್ತಾ ಕಾರ್ಖಾನೆ ಪ್ರಾರಂಭಿಸಲು ಮತ್ತು ನಮ್ಮ ಕಬ್ಬು ತುಂಬಿದ ವಾಹನಗಳಿಗೆ ಭದ್ರತೆ ನೀಡಲು ಆಗ್ರಹಿಸಿ ಎಸ್.ಪಿ. ಅವರಿಗೆ ಮುಧೋಳ ಐ.ಬಿ. ಯಲ್ಲಿ ಘೇರಾವ್ ಹಾಕಿದ ಘಟನೆ ನಡೆಯಿತು. ಕಾಣದ ಕೈಗಳ ಕೈವಾಡ, ಸ್ಥಳೀಯ ಶಾಸಕರ ಅಸಹಕಾರ, ನಿರ್ಲಕ್ಷ್ಯ, ಒಣ ರಾಜಕೀಯ ರೈತರ ವಿಷಯದಲ್ಲಿ ನಡೆಯುತ್ತಿರುವುದು ತೀರ ಅಸಹನೀಯವಾಗಿದೆ ಎಂದು ರೈತರು ಪ್ರತಿಭಟನೆಯಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದರು.
ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಒಕ್ಕೋರಲಿನಿಂದ ಬಂದ್ ಮಾಡಿರುವುದು ರೈತರಲ್ಲಿ ಆತಂಕ ಮೂಡಿದೆ. ಸಮಯಕ್ಕೆ ಸರಿಯಾಗಿ ಕಬ್ಬು ಕಾರ್ಖಾನೆ ರವಾನೆಯಾಗದಿದ್ದರೆ ಕಬ್ಬಿನ ತೂಕ ಕಡಿಮೆಯಾಗಿ ಇಳುವರಿ ಬರುವುದಿಲ್ಲ. ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಲಗಾಣಿ ಕೊಟ್ಟು ರೈತ ಸತ್ತು ಹೋಗುತ್ತಾನೆ. ಕುಳೆ ಕಬ್ಬು, ಹೊಸ ನಾಟಿ ಎಲ್ಲದಕ್ಕೂ ಕಬ್ಬು ಬೆಳೆಯುವ ರೈತನೇ ಹಾನಿ ಅನುಭವಿಸುತ್ತಾನೆ. ಇದನ್ನು ರೈತ ಸಂಘಟನೆಗಳು ಹಾಗೂ ಅಳುವ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಮಸ್ಯೆ ಇಷ್ಟು ಜಟೀಲವಾದರೂ ಸ್ಥಳೀಯ ಶಾಸಕ, ಪ್ರಭಾವಿ ಸಚಿವರಾಗಿದ್ದರೂ ಮಧ್ಯಸ್ಥಿಕೆ ವಹಿಸಿದೇ ಸಮಸ್ಯೆಯನ್ನು ಬೆಳೆಯಲು ಬಿಟ್ಟು ಕಣ್ಣು ಮುಚ್ಚಿ ಪಕುಳಿತಿರುವುದು ಅನುಮಾನ ಹುಟ್ಟಲು ಸಂಶಯ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ರೈತರ ಸ್ವಯಂ ಪ್ರೇರಿತ ಹೋರಾಟ ನಾಳೆಯಿಂದ ಮತ್ತಷ್ಟು ಕಾವು ಪಡೆದುಕೊಂಡು ಉಗ್ರ ಹೋರಾಟವಾಗಿ ರೂಪಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಚುನಾವಣೆ ವರ್ಷವಾಗಿರುವುದರಿಂದ ವಿವಿಧ ಪಕ್ಷಗಳು ಹೋರಾಟಕ್ಕೆ ಧುಮಿಕದ್ದಲ್ಲಿ ಸರ್ಕಾರಕ್ಕೆ ಮುಜುಗುರವಾಗುವುದರಲ್ಲಿ ಸಂಶಯವಿಲ್ಲ. ಸ್ಥಳೀಯ ಶಾಸಕರು ಪ್ರಭಾವಿ ಸಚಿವರಾಗಿರುವುದರಿಂದ ಯಾವುದೇ ದುರ್ಘಟನೆ ನಡೆಯುವ ಮೊದಲು ಎಚ್ಚತ್ತುಕೊಂಡು ಬೆನ್ನಿಗೆ ನಿಲ್ಲಬೇಕು ಇಂದಿನ ಹೋರಾಟ ಎಚ್ಚರಿಕೆ ಘಂಟೆಯಾಗಿದ್ದು, ಜಿಲ್ಲಾಡಳಿತ ರೈತರ ಹಿತ ಕಾಯುವಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಕಬ್ಬಿಗೆ ಉತ್ತಮ ಬೆಲೆ ಪಡೆಯಲು ಎಫ್.ಆರ್.ಪಿ. ಹಾಗೂ ಸಕ್ಕರೆಗೆ ಎಂ.ಎಸ್.ಪಿ ಹೆಚ್ಚಿಸಲು ಆಗ್ರಹಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ ಸಕ್ಕರೆ ಕಾರ್ಖಾನೆ ಮುಚ್ಚಿಸಿ ಹೋರಾಟ ಮಾಡುವುದರಿಂದ ಯಾವ ಪುರುಷಾರ್ಥ ಸಾಧನೆಯಾಗುವುದಿಲ್ಲ. ಈ ಹಿಂದೆ ಪ್ರಕಾಶ ಹುಕ್ಕೇರಿ ಸಕ್ಕರೆ ಸಚಿವರಾಗಿದ್ದಾಗ ಸರ್ಕಾರದಿಂದ ಪ್ರತಿ ಟನ್ ಗೆ ಹೆಚ್ಚುವರಿ ಹಣ ಕೊಡಿಸಿದ್ದರು. ಈಗಲೂ ಬಿಜೆಪಿ ಸರ್ಕಾರ ಪ್ರತಿ ಟನ್ ಕಬ್ಬಿನ ಮೇಲೆ ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು. ಕೂಡಲೇ ಸಚಿವ ಕಾರಜೋಳ ಹಾಗೂ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ರೈತರ ಕಬ್ಬು ತುಂಬಿದ ವಾಹನಗಳಿಗರ ಹಾಗೂ ಕಾರ್ಖಾನೆಗಳಿಗೆ ಸೂಕ್ತ ಭದ್ರತೆ ನೀಡಿ ಕಾರ್ಖಾನೆ ಪ್ರಾರಂಭಿಸಬೇಕು ಎಂದು ರೈತರು ಆಗ್ರಹಿಸಿದರು.ಈ ಸಂದರ್ಭದಲ್ಲಿ ನೂರಾರು ಜನ ರೈತರು ನಗರದ ರನ್ನ ಸರ್ಕಲ್ ಬಳಿ ಜಮಾಯಿಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸಿದರು.