ಮೋದಿಗೆ ಉರಿಗೌಡ, ದೊಡ್ಡನಂಜೇಗೌಡರ ಹೆಸರಲ್ಲಿ ಸ್ವಾಗತ; ಕಮಾನು ರಾತ್ರೋರಾತ್ರಿ ಮಾಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಲ್ಲೆಗೆ ಆಗಮಿಸುತ್ತಿದ್ದು, ಪ್ರಧಾನಿಯನ್ನು ಸ್ವಾಗತಿಸಲು ಸಕ್ಕರೆ ನಾಡು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸುಮಾರು 40 ವರ್ಷಗಳ ನಂತರ ದೇಶದ ಪ್ರಧಾನಿಯವರು ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ಸುಮಲತಾ ಅಂಬರೀಶ್, ಈ ಅಪೂರ್ವ ಸನ್ನಿವೇಶವನ್ನು ಸಾಕ್ಷೀಕರಿಸುವಂತೆ ಮಂಡ್ಯಾದ ಸ್ವಾಭಿಮಾನಿ ಜನರಲ್ಲಿ ಮನವಿ ಮಾಡಿರುವ ವೈಖರಿಯೂ ಗಮನಸೆಳೆದಿದೆ.

ವಿಧಾನಸಭಾ ಚುನಾವಣೆ ಎದುರಾಗಿರುವಂತೆಯೇ ಪ್ರಧಾನಿ ಮೋದಿಯವರ ಈ ಭೇಟಿ ಹಳೇ ಮೈಸೂರು ಭಾಗದಲ್ಲಿ ಸಂಚಲನ ಉಂಟುಮಾಡಿದೆ. ಪ್ರಧಾನಿಯವರ ಈ ಮಂಡ್ಯ ಭೇಟಿಯು ಬಿಜೆಪಿ ಪಾಲಿಗೆ ವರದಾನವಾಗಲಿದೆಯೇ ಎಂಬ ವಿಶ್ಲೇಷಣೆಯೂ ನಡೆದಿದೆ.

ಇದೇ ವೇಳೆ, ಪ್ರಧಾನಿಯವರನ್ನು ಸ್ವಾಗತಿಸಲು ಮಂಡ್ಯದಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ಹೆಸರಲ್ಲಿ ಸ್ವಾಗತ ಕಮಾನು ಹಾಕಲಾಗಿತ್ತು. ಟಿಪ್ಪು ಬಗ್ಗೆ ಕಾಂಗ್ರೆಸ್ ನಾಯಕರು ಒಲವು ಹೊಂದಿದ್ದಾರೆಂದು ಆರೋಪಿಸುತ್ತಿರುವ ಬಿಜೆಪಿ ನಾಯಕರು. ಟಿಪ್ಪು ಶ್ರೇಷ್ಟ ಅಲ್ಲ, ಮತಾಂಧನಾಗಿದ್ದ ಟಿಪ್ಪುನನ್ನು ವಧೆ ಮಾಡಿದ್ದ ಉರಿಗೌಡರು ಮತ್ತು ದೊಡ್ಡ ನಂಜೇಗೌಡರೇ ಶ್ರೇಷ್ಠ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಎದಿರೇಟು ನೀಡುತ್ತಿರುವ ಕಾಂಗ್ರೆಸ್ ನಾಯಕರು, ಉರಿಗೌಡರು ಮತ್ತು ದೊಡ್ಡ ನಂಜೇಗೌಡರು ಎಂಬ ಪಾತ್ರ ಬಿಜೆಪಿಯ ಸೃಷ್ಯೇ ಹೊರತು ಇತಿಹಾಸದಲ್ಲಿ ಇಲ್ಲ ಎಂದಿದ್ದಾರೆ.

ಈ ನಡುವೆ, ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಮಂಡ್ಯದಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ಹೆಸರಲ್ಲಿ ಹಾಕಲಾಗಿದ್ದ ಸ್ವಾಗತ ಕಮಾನು ರಾಜಕೀಯ ನಾಯಕರ ಜಟಾಪಟಿಗೆ ಕಾರಣವಾಗಿತ್ತು. ಬಿಜೆಪಿ ನಾಯಕರ ಈ ಪ್ರಯತ್ನ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೂ ಕಾರಣವಾಗಿತ್ತು. ‘ಪ್ರಧಾನಿಯ ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪ್ರತಿಮ‌ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ‌ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ತಕ್ಷಣ ಮಧ್ಯೆ ಪ್ರವೇಶಿಸಿ ಈ ಸ್ವಾಗತ ಕಮಾನನ್ನು ಕಿತ್ತು ಹಾಕಿಸುವಂತೆ ಮುಖ್ಯಮಂತ್ರಿಯನ್ನು ಅವರು ಒತ್ತಾಯಿಸಿ ಟ್ವೀಟ್ ಮಾಡಿದ್ದರು.

ಸಿದ್ದಾರಾಮಯ್ಯ ಅವರ ಆಕ್ರೋಶ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ‘ಉರಿಗೌಡರ ಬಗ್ಗೆ, ಕೆಲವರು ಉರ್ಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಸಿದ್ದರಾಮಯ್ಯರಿಗೆ ತಮ್ಮದೇ ದಾಟಿಯಲ್ಲಿ ಎದಿರೇಟು ನೀಡಿದ್ದಾರೆ.

ಬಹಳಷ್ಟು ಮಂದಿ, ‘ಇಲ್ಲದ ಪಾತ್ರಗಳನ್ನು ಸೃಷ್ಟಿಸಿ ಒಕ್ಕಲಿಗರಿಗೆ ಅಪಮಾನ ಮಾಡಲಾಗಿದೆ’ ಎಂದು ಸಿಟ್ಟು ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಮೋದಿ ಅವರನ್ನು ಸ್ವಾಗತಿಸಲು ಹಾಕಲಾಗಿದ್ದ ಉರಿಗೌಡ, ದೊಡ್ಡನಂಜೇಗೌಡರ ಹೆಸರಿದ್ದ ಕಮಾನು ರಾತ್ರೋ ರಾತ್ರಿ ಮಾಯವಾಗಿದೆ. ಸ್ಥಳೀಯ ಆಡಳಿತ ಈ ತೆರವು ಮಾಡಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಈ ಕ್ರಮಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಯೂ ಕುತೂಹಲ ಮೂಡಿಸಿದೆ.

https://twitter.com/kantharaj553/status/1634753609333354496?t=sJ3HHn5-T_jChpMfwzlYgA&s=19

Related posts