ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಂಡಿವೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸರಕಾರ ಮುಂದೆ ಹೋಗುತ್ತಿಲ್ಲ. ಚಕ್ರದಲ್ಲಿ ಗಾಳಿ ಇಲ್ಲದೆ ಮುಂದೆ ಹೋಗದ ವಾಹನದಂತಾಗಿದೆ ಸರಕಾರದ ಪರಿಸ್ಥಿತಿ ಎಂದು ಟೀಕಿಸಿದರು.
ಅಪಾರ ಭರವಸೆ ನೀಡಿದ ನಂತರ ಅಧಿಕಾರಕ್ಕೆ ಬಂದ ಈ ಸರಕಾರವು ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಸಿದ್ದರಾಮಯ್ಯನವರು ಎರಡನೇ ಅವಧಿಯಲ್ಲಿ ಪಕ್ಷದ ಮೇಲೆ ಹಿಡಿತ ಇಲ್ಲದ, ಸರಕಾರದ ಮೇಲೆ ನಿಯಂತ್ರಣ ಇಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ವಿಶ್ಲೇಷಿಸಿದರು.
ಉಚಿತ ಬಸ್ ಪ್ರಯಾಣ ಯೋಜನೆ ಹೊರತುಪಡಿಸಿ ಗೃಹಲಕ್ಷ್ಮಿ ಯೋಜನೆಯು ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲ. ಬರಿಯ ಉಚಿತ ಕೊಡುಗೆಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ಮಾಡುತ್ತಿದ್ದಾರೆ. ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಉಚಿತವಾಗಿ ವಿದ್ಯುತ್ ಕೊಡುವುದಾಗಿ ಹೇಳಿದವರು ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಬರಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸೇರಿ ಒಬ್ಬರೇ ಒಬ್ಬ ಸಚಿವರೂ ಹೋಗಿ ಅಲ್ಲಿನ ವಾಸ್ತವಿಕ ಸ್ಥಿತಿ ತಿಳಿಯಲಿಲ್ಲ. ಸರಕಾರ ದಿವಾಳಿಯಾಗಿದ್ದು, ಎಂಎಲ್‍ಎ ಅನುದಾನದ ಎರಡು ಕೋಟಿ ಪೈಕಿ ಕೇವಲ 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ. ಪ್ರಮುಖವಾದ ಎಸ್‍ಸಿ, ಎಸ್‍ಟಿ ಯೋಜನೆಗಳ ಅನುಷ್ಠಾನಕ್ಕೆ ನಿಗಮಗಳಿಗೆ ಹಣ ಬಿಡುಗಡೆ ಮಾಡಿಲ್ಲ. ತಾಂಡಾ ನಿಗಮ, ಅಂಬೇಡ್ಕರ್ ನಿಗಮ, ಬೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ ಸೇರಿ ಯಾವುದಕ್ಕೂ ಒಂದು ಪೈಸೆ ಹಣ ನೀಡಿಲ್ಲ ಎಂದು ಆರೋಪಿಸಿದರು.
ರೈತರು ಬರಗಾಲದ ಸಂಕಷ್ಟ ಅನುಭವಿಸುವ ಈ ಸಂದರ್ಭದಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ಟ್ರಾನ್ಸ್‍ಫಾರ್ಮರ್ ಸಹಿತ ಉಚಿತ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ರಾಜ್ಯ ಸರಕಾರ ರದ್ದು ಮಾಡಿದೆ. ಕೃಷಿ ಪಂಪ್‍ಸೆಟ್ ವಿದ್ಯುತ್ ಸಂಪರ್ಕದ ಖರ್ಚನ್ನು ರೈತರೇ ಭರಿಸಬೇಕು ಎಂಬ ಆದೇಶ ಮಾಡಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು.
ಉಚಿತ ಕೊಡುಗೆಗಳಿಗೇ ಹಣ ಇಲ್ಲ; ಅಭಿವೃದ್ಧಿ ಕಾರ್ಯಗಳು ರಾಜ್ಯದೆಲ್ಲೆಡೆ ಸಂಪೂರ್ಣ ಸ್ಥಗಿತವಾಗಿದೆ. ಐಟಿ ದಾಳಿಯಲ್ಲಿ 100 ಕೋಟಿ ಲಭಿಸಿದ್ದು, ಸರಕಾರದ ಭ್ರಷ್ಟಾಚಾರ ಬಯಲಾಗಿದೆ. ಲೂಟಿಕೋರ ಸರಕಾರ ಇದೆಂದು ಸಾಬೀತಾಗಿದೆ ಎಂದರು.
ನಾಯಕತ್ವಕ್ಕಾಗಿ ಎರಡು ಬಣಗಳ ಜಗ್ಗಾಟ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಡುವೆ ನಾಯಕತ್ವಕ್ಕಾಗಿ ಬಣಗಳ ಜಗ್ಗಾಟ ನಡೆಯುತ್ತಿದೆ. ಅದು ಈಗ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರೆದಿದೆ. ಉಪ ಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಆರಂಭವಾಗಿದೆ. ಕಾವೇರಿ ಜಲ ನ್ಯಾಯಮಂಡಳಿ ಮುಂದೆ ನೀರಿನ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲು ವಿಫಲವಾಗಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ ಎಂದು ವಿವರಿಸಿದರು.
ಮಳೆಯ ಕೊರತೆಯ ಅರಿವಿದ್ದರೂ ಮುಂಜಾಗ್ರತೆ ಕೈಗೊಂಡಿಲ್ಲ. ವಿದ್ಯುತ್ ಕೊರತೆಯಿಂದ ನಿರಂತರ ವಿದ್ಯುತ್ ನೀಡುವಲ್ಲಿ ಸರಕಾರ ವಿಫಲವಾಗಿದೆ. ಬರ ಪರಿಸ್ಥಿತಿ ಭೀಕರವಾಗಿದ್ದು, ಸಮರೋಪಾದಿಯಲ್ಲಿ ಅದನ್ನು ನಿರ್ವಹಿಸದೆ ಕೇಂದ್ರ ಸರಕಾರವನ್ನು ಮೂದಲಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ಆಡಳಿತ ಪಕ್ಷವಾಗಿ ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು ವಿರೋಧ ಪಕ್ಷಗಳ ಮೇಲೆ ದಾಳಿ ಮಾಡುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ತಮ್ಮ ವೈಫಲ್ಯವನ್ನು ಮುಚ್ಚಲು ಕೇಂದ್ರ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹುನ್ನಾರ ನಡೆಸಿದ್ದಾರೆ. ಅಸಂಬದ್ಧ, ಅಸತ್ಯ ಮತ್ತು ಅರ್ಧ ಸತ್ಯ ವಿಷಯಗಳನ್ನು ಪ್ರಸ್ತಾಪಿಸಿ ತಮ್ಮ ವೈಫಲ್ಯಗಳಿಗೆ ಪರದೆ ಹಾಕುವ ಕುತಂತ್ರವನ್ನು ಸಿಎಂ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಸರಕಾರವು ಬರ ಪರಿಹಾರಕ್ಕೆ ಹಣ ನೀಡುವುದು ನಿಶ್ಚಿತ. ಈ ಹಿಂದೆ ಕೂಡ ಬರಪೀಡಿತ ಅವಧಿಯಲ್ಲಿ ರಾಜ್ಯ ಸರಕಾರ ಕೇಂದ್ರದ ಪರಿಹಾರ ಹಣಕ್ಕೆ ಕಾಯದೆ ಬರಪರಿಹಾರ ಕಾಮಗಾರಿ ನಡೆಸಲಾಗುತ್ತಿತ್ತು. ಈಗ ಸಂಪನ್ಮೂಲಗಳ ಒತ್ತಡದಲ್ಲಿರುವ ಸಿದ್ದರಾಮಯ್ಯನವರು ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬರದ ಸಮಯದಲ್ಲಿ ರಾಜಕೀಯ ಮಾಡದೇ ಕೂಡಲೇ ಪೀಡಿತರ ನೆರವಿಗೆ ಧಾವಿಸಬೇಕಾಗಿತ್ತು. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಭೇಟಿ ಕೊಡುತ್ತಿದ್ದು, ಕಾಂಗ್ರೆಸ್ ಪಾಲಿಗೆ ರಾಜ್ಯ ಸರಕಾರ ಎಟಿಎಂನಂತಾಗಿದೆ. ಕಲೆಕ್ಷನ್ ಟಾರ್ಗೆಟ್ ನೀಡಲು ರಾಜ್ಯಕ್ಕೆ ಅವರು ಭೇಟಿ ಕೊಡುತ್ತಿದ್ದಾರೆ ಎಂದು ಎಲ್ಲರಿಗೂ ಮನವರಿಕೆ ಆಗಿದೆ ಎಂದು ನುಡಿದರು.
ಅಭಿವೃದ್ಧಿ ಕಾಮಗಾರಿಗಳ ಮಹಾಪೂರ
ಅನಗತ್ಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಸಿದ್ದರಾಮಯ್ಯನವರ ನಿತ್ಯ ಚಾಳಿಯಾಗಿದೆ. ಕೇಂದ್ರ ಸರಕಾರವು ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಹಾಪೂರವನ್ನೇ ಹರಿಸಿದೆ. ಬಹುಶಃ ಸಿದ್ದರಾಮಯ್ಯನವರಿಗೆ ಮಾಹಿತಿ ಕೊರತೆ ಇರಬಹುದು. ಎನ್‍ಡಿಆರ್‍ಎಫ್‍ನಲ್ಲಿ ಕೇಂದ್ರ ಸರಕಾರವು ಕಳೆದ 9 ವರ್ಷಗಳಲ್ಲಿ 12,784 ಕೋಟಿ ಬಿಡುಗಡೆ ಮಾಡಿದೆ. ಎಸ್‍ಡಿಆರ್‍ಎಫ್‍ನಲ್ಲಿ ಕೇಂದ್ರ ಸರಕಾರವು ಕಳೆದ 9 ವರ್ಷಗಳಲ್ಲಿ 3,377 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರಕಾರವು 2015ರಿಂದ 2024ರವರೆಗೆ 5.23 ಲಕ್ಷ ಕೋಟಿ ನೇರ ಅನುದಾನ ನೀಡಿದೆ ಎಂದು ವಿವರ ನೀಡಿದರು.
ಕೇಂದ್ರ ಸರಕಾರವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ 37,510 ಕೋಟಿ ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಸದ್ಯ 54 ಯೋಜನೆಗಳ 2431 ಕಿಮೀ ಉದ್ದದ ಹೆದ್ದಾರಿ ಕಾಮಗಾರಿ 42266 ಕೋಟಿ ಅನುದಾನದಲ್ಲಿ ಚಾಲ್ತಿಯಲ್ಲಿದೆ. ಬೆಂಗಳೂರು- ಮೈಸೂರು ಎಕ್ಸ್‍ಪ್ರೆಸ್ ವೇ ಕಾರ್ಯಾರಂಭ ಮಾಡುತ್ತಿದೆ. ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ಮುಂದಿನ ಮಾರ್ಚ್ ವೇಳೆಗೆ ಸಿದ್ಧ ಆಗಲಿದೆ ಎಂದು ವಿವರ ನೀಡಿದರು.
ಗ್ರಾಮೀಣ ರಸ್ತೆ ನಿರ್ಮಾಣಕ್ಕೆ 3,573 ಕೋಟಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡಿನಲ್ಲಿ 11.75 ಲಕ್ಷ ರೈತರಿಗೆ 20 ಸಾವಿರ ಕೋಟಿ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 59 ಲಕ್ಷ ರೈತರಿಗೆ ನೇರವಾಗಿ ವರ್ಷಕ್ಕೆ 6 ಸಾವಿರವನ್ನು ನೀಡುತ್ತಿದ್ದಾರೆ. ರಾಜ್ಯ ಸರಕಾರ ಮೊದಲು ನಾನು ಇದ್ದಾಗ 4 ಸಾವಿರ ಹೆಚ್ಚುವರಿಯಾಗಿ ನೀಡುತ್ತಿದ್ದು, ಸಿದ್ದರಾಮಯ್ಯರ ಸರಕಾರ ಅದನ್ನೂ ಸ್ಥಗಿತಗೊಳಿಸಿದ್ದಾರೆ ಎಂದು ಆಕ್ಷೇಪಿಸಿದರು.
ರಸಗೊಬ್ಬರ ಸಹಾಯಧನ ಈತನಕ 19,567 ಕೋಟಿ ನೀಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ 5,451 ಕೋಟಿ ನೀಡಲಾಗಿದೆ. ಭದ್ರಾ ಯೋಜನೆಗೆ 5300 ಕೋಟಿಯ ಅನುಮೋದನೆ ಲಭಿಸಿದೆ. ರಾಜ್ಯದ ರೈಲು ಮಾರ್ಗಗಳ ವಿದ್ಯುದೀಕರಣಕ್ಕೆ ಕೇಂದ್ರ ಸರಕಾರವು 1,722 ಕೋಟಿ ವೆಚ್ಚ ಮಾಡಿದೆ. ರಾಜ್ಯದ ರೈಲು ಯೋಜನೆಗಳಿಗೆ 2013ರಲ್ಲಿ 800 ಕೋಟಿ ನೀಡಿದರೆ, ಈಗ 3,700 ಕೋಟಿ ನೀಡಲಾಗುತ್ತಿದೆ. ಬೆಂಗಳೂರಿನ ಯಶವಂತಪುರ ಮತ್ತು ದಂಡು ರೈಲುನಿಲ್ದಾಣ ಅಭಿವೃದ್ಧಿಗೆ ಕೇಂದ್ರ ಸರಕಾರವು 380 ಕೋಟಿ, 525 ಕೋಟಿ ವ್ಯಯಿಸುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿ 450 ಕೋಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಮೂರನೇ ಮತ್ತು ನಾಲ್ಕನೇ ಮಾರ್ಗಕ್ಕೆ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಧಾರವಾಡ ಐಐಟಿ ಪ್ರಾರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವುದೇ ತಾರತಮ್ಯ ಮಾಡದೆ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಬೆಳಿಗ್ಗೆ ಎದ್ದರೆ ರಾಜಕೀಯ ಕಾರಣಕ್ಕಾಗಿ ನರೇಂದ್ರ ಮೋದಿಯವರನ್ನು ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಶಾಸಕರಾದ ಉದಯ್ ಗರುಡಾಚಾರ್ಯ, ಎಸ್.ಆರ್. ವಿಶ್ವನಾಥ್, ಎಸ್ ರಘು, ರವಿಸುಬ್ರಹ್ಮಣ್ಯ, ಎಸ್.ಮುನಿರಾಜು, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಉಪಸ್ಥಿತರಿದ್ದರು.