ರಾಜ್ಯದ ಸ್ತ್ರೀಯರಿಗೆ ಇನ್ನು ಬಸ್ ಪ್ರಯಾಣ ಉಚಿತ ; ಶಕ್ತಿ ಯೋಜನೆಗೆ ಸಿಎಂ ಮುನ್ನುಡಿ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ಯಾರೆಂಟಿ’ ಭರವಸೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಚಾಲನೆ ಸಿಕ್ಕಿದೆ. ರಾಜ್ಯದ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡುವ ಈ ‘ಶಕ್ತಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದರು.

ಶಕ್ತಿ ಸೌಧ ವಿಧಾನಸೌಧ ಮುಂಭಾಗ ಶಕ್ತಿ ಯೋಜನೆಯ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಉಪಸ್ಥಿತಿಯಲ್ಲಿ ‘ಶಕ್ತಿ’ ಯೋಜನೆಯ ಸ್ಮಾರ್ಟ್ ಕಾರ್ಡ್ ಬಿಡುಗಡೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿದರು. ಐವರು ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಸ್ಮಾರ್ಟ್ ಕಾರ್ಡ್’​ ವಿತರಿಸಿ ಈ ಉಚಿತ ಪ್ರಯಾಣದ ಯೋಜನೆ ಜಾರಿಗೆ ಮುನ್ನುಡಿ ಬರೆದರು. ಇದೇ ಸಂದರ್ಭದಲ್ಲಿ ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್​​​​ ಕಾರ್ಡ್​​ ಮಾದರಿಯನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ ಅವರು ಅನಾವರಣಗೊಳಿಸಿದರು.

ಸಚಿವರಾದ ಕೆ.ಜೆ.ಜಾರ್ಜ್​, ಮಧು ಬಂಗಾರಪ್ಪ, ಕೃಷ್ಣಭೈರೇಗೌಡ, ಸ್ಥಳೀಯ ಶಾಸಕರಾದ ರಿಜ್ವಾನ್ ಅರ್ಷದ್, ಹರಿಪ್ರಸಾದ್ ಸಹಿತ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಉಚಿತ ಬಸ್ ಪ್ರಾಯಾಣ ಸೌಲಭ್ಯ ಉದ್ಘಾಟನಾ ಕಾರ್ಯಕ್ರಮದ ಮೂಲಕ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು, ಅಧಿಕಾರಿಗಳು ಹಾಗೂ ಗಣ್ಯರ ಜೊತೆ ವಿಧಾನಸೌಧದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಸಾರಿಗೆ ಬಸ್ಸಿನಲ್ಲೇ ಪ್ರಯಾಣ ಕೈಗೊಂಡು ಗಮನಸೆಳೆದರು.

Related posts