ಲಕ್ಕುಂಡಿಯಲ್ಲಿ ಉತ್ಖನನ; ಸಾರ್ವಜನಿಕ ಪ್ರವೇಶ, ಫೋಟೋ–ವೀಡಿಯೋಗ್ರಫಿಗೆ ಸಂಪೂರ್ಣ ನಿಷೇಧ

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಭಾರೀ ಮೌಲ್ಯದ ಚಿನ್ನಾಭರಣ ಪತ್ತೆಯಾದ ಹಿನ್ನೆಲೆಯಲ್ಲಿ, ಅಲ್ಲಿನ ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಎದುರು ಉತ್ಖನನ ಕಾರ್ಯ ಆರಂಭಿಸಲಾಗಿದ್ದು, ಉತ್ಖನನ ನಡೆಯುತ್ತಿರುವ ಸ್ಥಳವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿದೆ.

ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಎದುರಿನ ಜಾಗದಲ್ಲಿ ಜನವರಿ 16ರಿಂದ ಉತ್ಖನನ ಕಾರ್ಯ ಆರಂಭವಾಗಿದ್ದು, ಪ್ರದೇಶ ಅತ್ಯಂತ ಸೂಕ್ಷ್ಮವಾಗಿರುವ ಕಾರಣ ಸಾರ್ವಜನಿಕ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಮಲಾಪುರ–ಹಂಪಿ ಹಾಗೂ ಉತ್ಖನನದ ಸಹ ನಿರ್ದೇಶಕರು ಜನವರಿ 16ರಂದು ನೀಡಿದ ಪತ್ರದ ಆಧಾರದಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ.

ಅಧಿಕೃತವಾಗಿ ನೇಮಕಗೊಂಡ ಸಿಬ್ಬಂದಿಯನ್ನು ಹೊರತುಪಡಿಸಿ, ಯಾವುದೇ ಸಾರ್ವಜನಿಕರು, ಪ್ರವಾಸಿಗರು ಅಥವಾ ಇತರ ವ್ಯಕ್ತಿಗಳು ಉತ್ಖನನ ಸ್ಥಳಕ್ಕೆ ಪ್ರವೇಶಿಸುವುದು, ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ನಡೆಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಕುರಿತು ಗದಗ ಜಿಲ್ಲಾಧಿಕಾರಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎನ್. ಶ್ರೀಧರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

Related posts