ಬೆಂಗಳೂರು: ಲೋಕಸಭೆ ಚುನಾವಣೆಗೆ ತಯಾರಿಯಲ್ಲಿ ತೊಡಗಿರುವ ಕಾಂಗ್ರೆಸ್ 15 ದಿನಗಳಲ್ಲಿ ಸಂಭಾವ್ಯ ಕೈ ಅಭ್ಯರ್ಥಿಗಳ ಹೆಸರು ಸಿದ್ಧಪಡಿಸಲು ಕಸರತ್ತು ನಡೆಸುತ್ತಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಬುಧವಾರ ನಡೆದ ಹಿರಿಯ ನಾಯಕರ ಸಭೆ ಗಮನಸೆಳೆಯಿತು.
ಕಚೇರಿಯಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ತಯಾರಿ ಕುರಿತು ಚರ್ಚೆ ಮಾಡಲಾಯಿತು. ಕರ್ನಾಟಕ ರಾಜ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯ ಕೇಂದ್ರವಾಗಿದೆ. ಸಂಸತ್ ಚುನಾವಣೆಯಲ್ಲಿ ರಾಜ್ಯದ ಜನ 20ಕ್ಕೂ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ವಿಶ್ವಾಸ ನಮಗಿದೆ. ನಾವು 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮಿಸುವುದಾಗಿ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ನಮಗೆ ಭರವಸೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಜನರು ಸಂತೋಷವಾಗಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ನಮಗೆ ಗೆಲವು ನಿಶ್ಛಿತವಾಗಿದೆ ಎಂದರು.
ಮುಂದಿನ 15 ದಿನಗಳಲ್ಲಿ ಸಂಸತ್ ಚುನಾವಣೆ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಹೆಸರು ಸೂಚಿಸಲು ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಲು ತಿಳಿಸಿದ್ದೇವೆ ಎಂದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿ ಜಾರಿ ಮಾಡಿ ಜನರಿಗೆ ತಲುಪಿಸಲು ನಿರಂತರವಾಗಿ ಗ್ಯಾರಂಟಿ ಯೋಜನೆಗಳನ್ನು ನಾವು ಪರಿಶೀಲನೆ ಮಾಡುತ್ತೇವೆ. ಈ ಯೋಜನೆಗಳ ಜಾರಿಗೆ ಎಲ್ಲೇ ತೊಂದರೆ ಆದರೂ ಅದಕ್ಕೆ ಸಂಬಂಧಿಸಿದ ಸಚಿವರುಗಳು ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.
ಇನ್ನು ನಿಗಮ ಮಂಡಳಿಗಳ ನೇಮಕ ಬಗ್ಗೆಯೂ ಚರ್ಚೆ ಮಾಡಲಾಯಿತು. ಈ ವಿಚಾರವಾಗಿ ಇನ್ನು ನಾಲ್ಕೈದು ಸುತ್ತಿನ ಚರ್ಚೆ ನಡೆಯಬೇಕಿದೆ. ಸದ್ಯ ನನಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಜವಾಬ್ದಾರಿ ವಹಿಸಿದ್ದು, ಇದೇ ತಿಂಗಳು 17ರಂದು ಚುನಾವಣೆ ಪೂರ್ಣಗೊಂಡ ತಕ್ಷಣವೇ ನಾನು ಕರ್ನಾಟಕಕ್ಕೆ ಆಗಮಿಸಿ ನಿಗಮಮಂಡಳಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದವರು ತಿಳಿಸಿದರು.
ಪಕ್ಷದ ಸಂಘಟನೆ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆ ಉತ್ತರಿಸಿದ ಅವರು, “ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ಹಾಲಿ ಪದಾಧಿಕಾರಿಗಳ ಪೈಕಿ ಹಲವರು ಶಾಸಕರು, ಸಚಿವರುಗಳಾಗಿದ್ದಾರೆ. ಅವರಿಗೆ ಸಂಘಟನಾ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕಿದೆ. ಯುವಕರು, ಹೊಸಬರಿಗೆ ಸಂಘಟನೆಯ ಜವಾಬ್ದಾರಿ ನೀಡಲು ಚಿಂತನೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.