ವಿಜಯಪುರ: ತಿಕೋಟಾ ತಾಲೂಕಿನ ನವರಸಪುರ ಗ್ರಾಮದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿ ಮೇಲೆ ಅದೇ ಕಾಲೇಜಿನ ನಾಲ್ವರು ಎಂಬಿಬಿಎಸ್ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮತ್ತು ದೈಹಿಕ ಹಿಂಸೆ ನೀಡಲಾಗಿದೆ ಎಂಬ ಆರೋಪ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಿಜಯಪುರ ಮತ್ತು ತಿಕೋಟಾ ತಹಶೀಲ್ದಾರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಭೇಟಿ ಮಾಡಿ, ಪರಿಶೀಲಿಸಿ, ಯೋಗಕ್ಷೇಮ ವಿಚಾರಿಸಿದ್ದಾರೆ. ವಿದ್ಯಾರ್ಥಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಹಾಗೂ ವಿದ್ಯಾರ್ಥಿಯು ದೈಹಿಕವಾಗಿ ಆರೋಗ್ಯಕರವಾಗಿದ್ದಾನೆ ಎಂದು ವರದಿ ನೀಡಿದ್ದಾರೆ.
ಘಟನೆಯ ವಿವರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹ್ಮದ ಮೊಹಸೀನ್ ಅವರಿಗೆ ಒದಗಿಸಿದ್ದು, ಈ ಕುರಿತು ಅವರು ಹಲ್ಲೆಗೊಳಗಾದ ವಿದ್ಯಾರ್ಥಿಗೆ ಸೂಕ್ತ ಸಹಾಯ ಹಾಗೂ ಹಲ್ಲೆ ಮಾಡಿರುವ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ. ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ಸೂಕ್ತ ಕಾನೂನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.