ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

ಬೆಂಗಳೂರು: ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ತಮ್ಮ 114ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ಸಮೀಪ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್​​ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಮಕ್ಕಳಿಲ್ಲದ ಅವರು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದ್ದರು. ಹಾಗಾಗಿ ಅವರು ಸಾಲು ಮರದ ತಿಮ್ಮಕ್ಕೆ ಎಂದೇ ಪ್ರಸಿದ್ಧರಾದಾರು. ಅವರ ಈ ಸಾಧನೆಯನ್ನು ಗೌರವಿಸಿ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ನೀಡಿತ್ತು.

ಸಂತಾಪ:

ಗಿಡಮರಗಳ ಲಾಲನೆ-ಪಾಲನೆ ಪರಿಸರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಸಾವಿರಾರು ಪರಿಸರ ಪ್ರೇಮಿಗಳಿಗೆ ಆದರ್ಶವಾಗಿರುವ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114 ವರ್ಷ) ಅವರು ಇಹಲೋಕ ತ್ಯಜಿಸಿದರು ಎನ್ನುವ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಸಂತಾಪ ಸೂಚಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರು ರಾಮನಗರದಲ್ಲಿ ತಮ್ಮ ಮಕ್ಕಳಂತೆಯೇ ಪೋಷಿಸಿ ಬೆಳೆಸಿದ ಮರಗಳು ಇಂದಿಗೂ ಸ್ವಚ್ಛಂದವಾಗಿ ಪ್ರಕೃತಿ ಮಾತೆಯ ಮಡಿಲಲ್ಲಿ ರಾರಾಜಿಸುತ್ತಿವೆ. ತಮ್ಮ ಜೀವನವನ್ನೇ ಪ್ರಕೃತಿ, ಪರಿಸರಕ್ಕಾಗಿ ಮೀಸಲಿಟ್ಟು ಸರ್ವರಿಗೂ ಮಾದರಿಯಾಗಿದ್ದರು ಎಂದವರು ಹೇಳಿದ್ದಾರೆ.

Related posts