ನವದೆಹಲಿ: “ಶಾಂತಿ ಎಂದರೆ ಕೇವಲ ಯುದ್ಧದ ಅನುಪಸ್ಥಿತಿ ಅಲ್ಲ, ಅದು ಘನತೆ, ಸಮಾನತೆ ಮತ್ತು ಹಂಚಿಕೆಯ ಉದ್ದೇಶದ ವಿಜಯ. ಆ ವಿಜಯದಲ್ಲಿ ಮಹಿಳೆಯರು ಮುನ್ನಡೆಸಬೇಕು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದರು.
ನವದೆಹಲಿಯ ಮಾಣೆಕ್ಷಾ ಕೇಂದ್ರದಲ್ಲಿ ಆಗಸ್ಟ್ 18ರಿಂದ 29ರವರೆಗೆ ನಡೆದ ವಿಶ್ವಸಂಸ್ಥೆಯ ಮಹಿಳಾ ಮಿಲಿಟರಿ ಅಧಿಕಾರಿಗಳ ಕೋರ್ಸ್ (UNWMOC-2025) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ 15 ರಾಷ್ಟ್ರಗಳ ಮಹಿಳಾ ಮಿಲಿಟರಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸೌತ್ ಬ್ಲಾಕ್ನಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆದ್ದೇಶಿಸಿ ಮಾತನಾಡಿದ ಸಿಂಗ್, “ನೀವು ಬದಲಾವಣೆಯ ಪಥದರ್ಶಕರು. ನಿಮ್ಮ ಸಮರ್ಪಣೆ ಜಾಗತಿಕ ಭದ್ರತೆಯ ರಚನೆಯನ್ನು ಬಲಪಡಿಸುತ್ತದೆ. ಭಾರತವು ನಿಮ್ಮ ಕೊಡುಗೆಯನ್ನು ಹೆಮ್ಮೆಪಡುವುದರೊಂದಿಗೆ ನಿಮ್ಮ ಪ್ರಯಾಣಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು ಹೇಳಿದರು.
ಮಹಿಳಾ ಶಾಂತಿಪಾಲಕರು ಸಂಘರ್ಷ ಪ್ರದೇಶಗಳಲ್ಲಿ ವಿಶಿಷ್ಟ ದೃಷ್ಟಿಕೋನ ತರುತ್ತಾರೆ, ವಿಶೇಷವಾಗಿ ಸ್ಥಳೀಯ ಸಮುದಾಯಗಳಲ್ಲಿ ವಿಶ್ವಾಸ ನಿರ್ಮಾಣದಲ್ಲಿ ಅವರ ಪಾತ್ರ ಅಮೂಲ್ಯ ಎಂದು ಅವರು ಒತ್ತಿ ಹೇಳಿದರು. “ಮಹಿಳೆಯರ ಉಪಸ್ಥಿತಿ ಲೈಂಗಿಕ ಹಿಂಸಾಚಾರವನ್ನು ತಡೆಯಲು, ಮಾನವೀಯ ಸಂಪರ್ಕವನ್ನು ಬೆಳೆಸಲು, ಹಾಗೂ ಸ್ಥಳೀಯ ಮಹಿಳೆಯರು ಶಾಂತಿಯ ಏಜೆಂಟರಾಗಿ ತಮ್ಮನ್ನು ಕಾಣುವಂತೆ ಪ್ರೇರೇಪಿಸಲು ಸಹಕಾರಿ” ಎಂದರು.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಅತಿ ಹೆಚ್ಚು ಸೈನಿಕರನ್ನು ಒದಗಿಸುವ ರಾಷ್ಟ್ರ ಭಾರತ. ಮಹಿಳೆಯರ ಏಕೀಕರಣವನ್ನು ಭಾರತ ದೀರ್ಘಕಾಲದಿಂದ ಬೆಂಬಲಿಸುತ್ತಿದೆ. “ನಮ್ಮ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಸಮಾನ ಅವಕಾಶ ಕಲ್ಪಿಸಲು ಸರ್ಕಾರ ನೀತಿಗಳನ್ನು ಬಲಪಡಿಸುತ್ತಿದೆ” ಎಂದು ಸಿಂಗ್ ತಿಳಿಸಿದರು.
UNWMOC-2025 ಪಠ್ಯಕ್ರಮವು ಅಂತರರಾಷ್ಟ್ರೀಯ ಮಾನವೀಯ ಕಾನೂನು, ನಾಗರಿಕರ ರಕ್ಷಣೆ, ನಿರಾಶ್ರಿತರು ಮತ್ತು ಸ್ಥಳಾಂತರಿತರು, ನಡವಳಿಕೆ ಮತ್ತು ಶಿಸ್ತು, ಸಂಘರ್ಷಸಂಬಂಧಿತ ಲೈಂಗಿಕ ಹಿಂಸೆ ಮುಂತಾದ ವಿಷಯಗಳನ್ನು ಒಳಗೊಂಡಿತ್ತು. ಅಧಿಕಾರಿಗಳು ಸಹಾನುಭೂತಿ ಮತ್ತು ಸಂಕಲ್ಪದೊಂದಿಗೆ ಅಸ್ಥಿರ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ಸಾಧನಗಳನ್ನು ಪಡೆಯುವಂತಾಗುತ್ತದೆ.
ಈ ಬಾರಿ ಕೋರ್ಸ್ನಲ್ಲಿ ಅರ್ಮೇನಿಯಾ, ಕಾಂಗೋ, ಈಜಿಪ್ಟ್, ನೇಪಾಳ, ಶ್ರೀಲಂಕಾ, ವಿಯೆಟ್ನಾಂ ಸೇರಿದಂತೆ 15 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಿಂದ 12 ಮಹಿಳಾ ಅಧಿಕಾರಿಗಳು ಹಾಗೂ 5 ಇಂಟರ್ನ್ಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ‘ಬ್ಲೂ ಹೆಲ್ಮೆಟ್ ಒಡಿಸ್ಸಿ: 75 ವರ್ಷಗಳ ಭಾರತೀಯ ಶಾಂತಿಪಾಲನೆ’ ಎಂಬ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರು. “ನೀಲಿಹೆಲ್ಮೆಟ್ ಆಕಾಶದಂತೆ ರಕ್ಷಣೆ ಮತ್ತು ಭದ್ರತೆಯನ್ನು ಪ್ರತಿನಿಧಿಸುತ್ತದೆ; ಸಾಗರಗಳಂತೆ ಗಡಿಗಳು ಮತ್ತು ಸಂಸ್ಕೃತಿಗಳಾದ್ಯಂತ ಸಂಬಂಧಗಳನ್ನು ಬೆಳೆಸುತ್ತದೆ” ಎಂದು ಅವರು ಪ್ರತಿಪಾದಿಸಿದರು.