ಸರ್ವರ ಹಿತ ಕಾಂಗ್ರೆಸ್‌ ಸರ್ಕಾರದ ಪಥ: ರಣದೀಪ್‌ ಸುರ್ಜೇವಾಲ

ಬೆಂಗಳೂರು: ʻʻನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ. ಅವಳೊಂದು ಮಹಾಶಕ್ತಿʼʼ ಎಂಬುದಾಗಿ ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದು ಅಕ್ಷರಶಃ ಸತ್ಯ. ಈ ವಾಕ್ಯದಂತೆ ಕರ್ನಾಟಕದ ನಮ್ಮ ಕಾಂಗ್ರೆಸ್‌ ಸರ್ಕಾರ ನಡೆಯುತ್ತಿದೆ. ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಕಾಂಗ್ರೆಸ್‌ ಸರ್ಕಾರದ ಸಂಕಲ್ಪವಾಗಿದೆ. ಅಲ್ಲದೆ, ʻಸರ್ವರ ಹಿತ – ಕಾಂಗ್ರೆಸ್ ಸರ್ಕಾರದ ಫಥʼ ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.

ರಾಜ್ಯ ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಬಜೆಟ್ 4.09 ಲಕ್ಷ ಕೋಟಿ ರೂ.ಗಳನ್ನು ಒಳಗೊಂಡಿದೆ. ಕಳೆದ ವರ್ಷದ ಬಜೆಟ್ ಅಂದಾಜುಗಳಿಗಿಂತ ಶೇ. 10.3ರಷ್ಟು ಬೆಳವಣಿಗೆ ಕಂಡುಬಂದಿದೆ. ಕರ್ನಾಟಕ ರಾಜ್ಯದ ಜಿಡಿಪಿ 7.4% ರಷ್ಟು ಬೆಳೆದಿದೆ ಅದರೊಂದಿಗೆ ಕೃಷಿ ಕ್ಷೇತ್ರದಲ್ಲಿ ಕೂಡ ಶೇ. 4ರಷ್ಟು ಬೆಳವಣಿಗೆಯನ್ನು ಕಂಡಿದೆ. ಕರ್ನಾಟಕ ರಾಜ್ಯದ ಜಿಡಿಪಿ ರಾಷ್ಟ್ರೀಯ ಬೆಳವಣಿಗೆಯನ್ನು ಶೇ. 6.2% ರಷ್ಟು ಮೀರಿಸಿದೆ. ಇದು ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ದೃಢಪಡಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೊಂದು ಪರಿಪೂರ್ಣ ಬಜೆಟ್‌ ಆಗಿದ್ದು, ಕ್ರೀಡೆ, ಸಮಾಜ ಕಲ್ಯಾಣ, ಕೃಷಿ, ನೀರಾವರಿ, ಗ್ಯಾರಂಟಿ ಸೇರಿ ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡುವ ಮೂಲಕ ಮಹಿಳೆಯರು, ರೈತರು, ಯುವಕರು, ಅಲ್ಪಸಂಖ್ಯಾತರು ಸೇರಿ ಸರ್ವರನ್ನೂ ಸಮಾನವಾಗಿ ಕರೆದೊಯ್ಯುವ ಬಜೆಟ್‌ ಇದಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ. ಜೊತೆಗೆ ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಲ್ಲಿ ಬಹುತೇಕ ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈಡೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಜೆಟ್ ರಾಜ್ಯದ ಜನರನ್ನು ಸಬಲೀಕರಣಗೊಳಿಸಲಿದೆ. ನಮ್ಮ 5 ಗ್ಯಾರಂಟಿಗಳ ಈಡೇರಿಕೆಗಾಗಿ 51,034 ಕೋಟಿ ರೂ.ಗಳನ್ನು ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಬಂಡವಾಳ ಹೂಡಿಕೆಗಾಗಿ 83,200 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೂಲಕ ನುಡಿದಂತೆ ನಡೆದಿದ್ದೇವೆ ಎಂದವರು ಹೇಳಿದ್ದಾರೆ.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಧ್ವನಿಯಾಗಲಾಗಿದೆ. ⁠ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿಯಲ್ಲಿ ಒಟ್ಟು 42,018 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಗೆ 29,992 ರೂ. ಮತ್ತು ಬುಡಕಟ್ಟು ಉಪ ಯೋಜನೆಗೆ 12,026 ಕೋಟಿ ರೂ.ಗಳು ಸೇರಿವೆ. ಅಲ್ಲದೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಡಿಯಲ್ಲಿ 33 ವಿಶೇಷ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ ಎಂದಿದ್ದಾರೆ.

Related posts