ಸಿದ್ದರಾಮಯ್ಯ ಸಲಹೆಗಾರರಾಗಿ ಸುನೀಲ್ ಕನಗೋಲು ನೇಮಕ

ಬೆಂಗಳೂರು: ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಸೂತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ತೋರಿಸಿಕೊಟ್ಟ ‘ಚುನಾವಣಾ ಚಾಣಾಕ್ಷ’ ಸುನೀಲ್ ಕನಗೋಲು ಅವರೀಗ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನೂತನ‌ ಸಲಹೆಗಾರ.

ಬಳ್ಳಾರಿ ಮೂಲದ ಸುನೀಲ್ ಕನಗೋಲು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರೇ ಆದೇಶಿಸಿದ್ದಾರೆ. ಸಿದ್ದರಾಮಯ್ಯ ಅವರ ಶಿಫಾರಸಿನಂತೆ ಸುನೀಲ್ ಕನಗೋಲು ಅವರ ನೇಮಕಾತಿ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಯಾರಿವರು ಸುನೀಲ್ ಕನಗೋಲು?

ಬಿಜೆಪಿಯ ಆಡಳಿತಾವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪಗಳು ಪ್ರತಿಧ್ವನಿಸಿವೆ. ಈ ಬಗ್ಗೆ ಹಲವಾರು ದೂರುಗಳು ಸಲ್ಲಿಕೆಯಾದರೂ ಪರಿಣಾಮಕಾರಿ ತನಿಖೆಗಳು ನಡೆದಿಲ್ಲ. ಜೊತೆಗೆ ಕಾಂಗ್ರೆಸ್ ಮುಕ್ತ ಕರ್ನಾಟಕ ಸೂತ್ರ ಜಾರಿಗೆ ಆಡಳಿತಾರೂಢ ಬಿಜೆಪಿ ರಹಸ್ಯ ಕಾರ್ಯತಂತ್ರ ರೂಪಿಸಿತ್ತು.

ಈ ನಡುವೆ ದೂರು, ಕೇಸ್‌ಗಳಿಂದ ಬಿಜೆಪಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಕೈ ನಾಯಕರಿಗೆ ಮನವರಿಕೆಯಾಗುತ್ತಿದ್ದಂತೆಯೇ ರಂಗ ಪ್ರವೇಶಿಸಿದ ಸುನೀಲ್ ಕನಗೋಲು ಅವರು ಕಾಂಗ್ರೆಸ್ ಪಕ್ಷಕ್ಕೆ ಕುತೂಹಲಕಾರಿ ಸಲಹೆಯನ್ನು ನೀಡಿದ್ದರು. ಅದುವೇ ‘ಪೇ ಸಿಎಂ, ಸೇ ಸಿಎಂ’ ಅಭಿಯಾನ.

ಕಾಂಗ್ರೆಸ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದ ಕನುಗೋಲು ಅವರು ತಂತ್ರಗಾರಿಕೆ ಹೆಣೆದಿದ್ದರು. ಅವರ ಅಭಿಯಾನ ಸೂತ್ರದಿಂದಾಗಿಯೇ ಬೊಮ್ಮಾಯಿ ಸರ್ಕಾರ ಹಗರಣಗಳ ಸರ್ಕಾರ ಎಂದು ಜನರ ಮುಂದೆ ಬಿಂಬಿತವಾಗುವಲ್ಲಿ ಯಶಸ್ವಿಯಾಯಿತು.

ಇದೀಗ ಸುನೀಲ್ ಕನಗೋಲು ಅವರನ್ನೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ.

Related posts