‘ಸ್ಥಳೀಯ ಸರ್ಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ?’: ಸಿಎಂ ವಿರುದ್ದ ಹೆಚ್ಡಿಕೆ ಟ್ವೀಟಾಸ್ತ್ರ

ಬೆಂಗಳೂರು: ಸ್ಥಳೀಯ ಸರ್ಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಕುಮಾರಸ್ವಾಮಿ, ಮಾನವ ಸರಪಳಿ ನೆಪದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಜಾಪ್ರಭುತ್ವ ಉಳಿಸುವ ಕಾಳಜಿಯೇ ಇಲ್ಲ. ಇದ್ದರೆ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಅಧಿಕಾರಕ್ಕೇರಿದಾಗಿನಿಂದ ಪ್ರಜಾಪ್ರಭುತ್ವದ ಸರಪಳಿಯ ತಳಮಟ್ಟದ ಆಧಾರಸ್ತಂಭಗಳಾದ ಜಿಲ್ಲಾ & ತಾಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸಿಲ್ಲ, ಯಾಕೆ? ಸ್ಥಳೀಯ ಸರಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ವರ್ಷದ ಮೇಲೆ 4 ತಿಂಗಳಾಯಿತು (2023 ಮೇ 20). ಈವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವ, ಜನಪರತೆ, ಜಾಹೀರಾತುಗಳಲ್ಲಷ್ಟೆ ಝಗಮಗಿಸುತ್ತಿದೆ ಎಂದವರು ಟೀಕಿಸಿದ್ದಾರೆ.

ವಿಚ್ಚಿಧ್ರ ಶಕ್ತಿಗಳನ್ನು ದಮನ ಮಾಡುವುದು ಎಂದರೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ತಿಲಾಂಜಲಿ ಇಡುವುದೇ? ಮಾನವ ಸರಪಳಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಜನರ ತೆರಿಗೆ ಹಣದ ಪೋಲು ಪ್ರಜಾಪ್ರಭುತ್ವಕ್ಕೆ ಭೂಷಣವೇ? ಎಂದು ಪ್ರಶ್ನಿಸಿರುವ ಹೆಚ್ಡಿಕೆ, ಮೊದಲು ಸ್ಥಳೀಯ ಸಂಸ್ಥೆ ಚುನಾವಣೆ ಘೋಷಿಸಿ. ನೈಜ ಪ್ರಜಾಪ್ರಭುತ್ವದ ಸರಪಳಿಯನ್ನು ಗಟ್ಟಿಗೊಳಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Related posts