ಬೆಂಗಳೂರು: ರಾಜ್ಯದಲ್ಲಿ ಹಾಲು ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಅಚ್ಚರಿಯ ತೀರ್ಮಾನವೊಂದರಲ್ಲಿ ನಂದಿನಿ ಹಾಲು ಹಾಗೂ ಮೊಸರು ಸಹಿತ ಹಾಲು ಉತ್ಪನ್ನಗಳ ದರ ಏರಿಕೆಯ ಕ್ರಮವನ್ನು ಸರ್ಕಾರ ತಡೆ ಹಿಡಿದಿದೆ.
ಹಾಲು ಹಾಗೂ ಮೊಸರು ದರ ಲೀಟರಿಗೆ ಮೂರು ರೂಪಾಯಿ ಹೆಚ್ಚಳ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ತೀರ್ಮಾನಿಸಿತ್ತು. ಈ ಪರಿಷ್ಕೃತ ದರ ನವೆಂಬರ್15ರಿಂದ ಜಾರಿಗೆ ಬರಲಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿದ್ದವು.
ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಚುನಾವಣಾ ಹೊಸ್ತಿಲಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬಗ್ಗೆ ಬಿಜೆಪಿ ನಾಯಕರು ಗಲಿಬಿಲಿಗೊಂಡಿದ್ದಾರೆ. ಈ ಬೆಳವಣಿಗೆಗಳ ನಡುವೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿ ಹಾಲಿನ ದರ ಏರಿಕೆಯ ಕ್ರಮವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸೂಚಿಸಿದ್ದಾರೆ. ಈ ತಿಂಗಳ.20ರ ನಂತರ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಸಿಎಂ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.