ಹಿಂದಿ ಹೇರಿಕೆಗೆ ವಿರೋಧ, ಬೆಳಗಾವಿ ಒಂದಿಂಚು ಜಾಗ ಬಿಡೆವು: ನುಡಿ ಜಾತ್ರೆಯಲ್ಲಿ ರಣಕಹಳೆ

ಹಾವೇರಿ: ಕೇಂದ್ರ ಸರ್ಕಾರದ ಒತ್ತಾಯದ ಹಿಂದಿ ಹೇರಿಕೆಗೆ ಪ್ರಭಲ ವಿರೋಧವಿದೆ. ಬೆಳಗಾವಿಯ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡೆವು ಎಂದು ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ. ರಾ. ಗೋವಿಂದ ಅವರು ಕಟುವಾಗಿ ಹೇಳಿದ್ದಾರೆ

ಹಾವೇರಿಯಲ್ಲಿ 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ನಡೆದ ಕನ್ನಡ ಚಳುವಳಿಗಳ ಪರಿಣಾಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೋಕಾಕ್ ಚಳುವಳಿ ಮುನ್ನ ಇದ್ದ ಸರ್ಕಾರ ಸಾಹಿತಿಗಳ ಕನ್ನಡ ಪರವಾದ ಕೋರಿಕೆ ಒಪ್ಪದಾದಾಗ ಸಾಹಿತಿಗಳ ಕರೆಯ ಮೇರೆಗೆ ರಾಜಕುಮಾರ ಅವರು ಗೋಕಾಕ್ ಚಳುವಳಿ ನೆತೃತ್ವವನ್ನು ವಹಿಸಿ, ಸರ್ಕಾರ ಕಿತ್ತೊಗೆಯಲಾಯಿತು ಎಂಬುದು ಇತಿಹಾಸ. ರಾಜಕುಮಾರ ನೇತೃತ್ವದ ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡು ನಾಯಕರಾದ ಅನೇಕರು ರಾಜಕೀಯ ಪ್ರವೇಶಿಸಿ, ಅಧಿಕಾರದ ಚುಕ್ಕಾಣಿ ಹಿಡಿದು ನಂತರದಲ್ಲಿ ಚಳುವಳಿ ಅಡಗಿಸಲು ಮುಂದಾದದ್ದು, ಇದನ್ನ ವಿರೋಧಿಸಿದಾಗ ರಾಜಕುಮಾರ ಮೇಲೆ ಹಲ್ಲೆ ಮಾಡಿಸಿದ್ದು ವಿಪರ್ಯಾಸ ಎಂದರು.

ಬೇರೆ ಬೇರೆ ಪಕ್ಕದ ರಾಜ್ಯಗಳ ರಾಜಕೀಯ ನೇತಾರರು ತಮ್ಮ ಭಾಷೆ ಬಗ್ಗೆ ಇರುವ ನಿಲುವು ಬದ್ಧತೆ, ಮನ್ನಣೆ ನೋಡಿದರೇ ಸಂತೋಷ ಎನಿಸುತ್ತದೆ. ರಾಜ್ಯದ ನೇತಾರರ ವರ್ತನೆ ಬೇಸರ ಮೂಡಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನ ಪಡೆಯಲಷ್ಟೇ ಸೀಮಿತವಾಗದೇ ಕನ್ನಡ ಪರ ಹೋರಾಟ, ನಿಲುವುಗಳ ಬಗ್ಗೆ ಸಕ್ರಿಯವಾಗಬೇಕು. ಇದಕ್ಕೆ ನಮ್ಮೆಲ್ಲರ ಬೆಂಬಲ ನಿತ್ಯ ನಿರಂತರವಾಗಿ ಇರಲಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಆಶಯ ನುಡಿಗಳನ್ನಾಡಿ, ಮಂತ್ರಕ್ಕೆಂದು ಮಾವಿನಕಾಯಿ ಉದುರುವುದಿಲ್ಲ, ಅಂದು ಹೋರಾಟ ಮಾಡಿದ್ದಕ್ಕಾಗಿಯೇ ಇಂದು ಮೆಟ್ರೋದಲ್ಲಿ ಕನ್ನಡವಿದೆ. ಹೋರಾಟ ಪ್ರತಿಭಟನೆ ಮಾಡದಿದ್ದರೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಕನ್ನಡ ಚಳುವಳಿಗಳ ಪರಿಣಾಮ ಇಂದು ಕನ್ನಡ ಉಳಿದಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಏಕೀಕರಣ, ಗೋಕಾಕ್ ಮತ್ತು ಕನ್ನಡ ಚಳುವಳಿ ಕುರಿತು ಮಾತನಾಡಿದ ಎಚ್. ಎಸ್. ಗೋಪಾಲರಾವ್ ಅವರು, ಉತ್ತರ ಕರ್ನಾಟಕದ ಮಹನೀಯರಾದ ಎಸ್. ಟಿ. ಕಂಬಳಿ, ಹೊಸಮನಿ ಸಿದ್ದಪ್ಪ, ಆಲೂರು ವೆಂಕಟರಾಯರು ಹಾಗೂ ಇತರರ ಶ್ರಮದಿಂದ ಏಕೀಕರಣವಾಯಿತು ಆದರೂ ಸಹ ಸಮಸ್ಯೆಗಳು ಬಗೆ ಹರಿದಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕರೂ ಸಿಗಬೇಕಾದ ಅನುದಾನ ದೊರೆತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಎಲ್ಲವನ್ನೂ ಹೋರಾಟದಿಂದಲೇ ಪಡೆಯಲಾಗದು, ಆಳುವ ಜನರು ತಮ್ಮ ಜವಾಬ್ದಾರಿ ಅರಿಯಬೇಕು ಎಂದರು.

ಕಾವೇರಿ, ಕೃಷ್ಣ, ಮಹದಾಯಿ ಚಳುವಳಿ ಕುರಿತು ವಿಷಯ ಮಂಡಿಸಿದ ಮಹೇಶ ನಾಳವಾಡ ಅವರು, ಶೇ. 60ರಷ್ಟು ಕೃಷ್ಣ, ಶೇ. 18 ರಷ್ಟು ಕಾವೇರಿ ಜಲಾನಯನ ಪ್ರದೇಶ ಇದೆ. ಕರ್ನಾಟಕ ನಮಕರಣವಾಗಿ 67 ವರ್ಷಗಳು ಕಳೆದರೂ ರಾಜ್ಯದ ಬಹುತೇಕ ಎಲ್ಲ ನದಿಗಳ ನೀರು ಹಂಚಿಕೆ ವಿವಾದ ಇನ್ನೂ ಜೀವಂತವಾಗಿವೆ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ಶತಮಾನಗಳಿಂದಲೂ ಅನ್ಯಾಯ ಆಗುತ್ತಿದೆ. ನ್ಯಾಯಾಧಿಕರಣ ಮಂಡಳಿಯಿಂದ ನ್ಯಾಯ ಸಿಗುತ್ತಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕನ್ನಡ ಚಳುವಳಿ ಅಂದು ಇಂದು ಕುರಿತು ಮಾತನಾಡಿದ ಶೆ ಬೋ ರಾಧಾಕೃಷ್ಣ, ಕನ್ನಡ ಚಳುವಳಿ ಎಂದರೆ ನಗರ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ನಿಂತು ಗೋಷಣೆ ಕೂಗಿ ಕಲ್ಲು ಹೊಡೆಯುವುದಲ್ಲ ಅದು ನಿರಂತರವಾದುದು. ಗೋಕಾಕ್ ಚಳುವಳಿ ನಂತರ ಅನೇಕ ಕನ್ನಡ ಪರ ಸಂಘ ಸಂಸ್ಥೆ ರಚನೆಯಾದವು ಅವುಗಳ ಬಲವರ್ಧನೆ ಆಗಿಲ್ಲ ಎಂದರು.

2000 ಇಸ್ವಿ ನಂತರ ಕನ್ನಡ ಚಳುವಳಿ ಸೊರಗುತ್ತಾ ಸಾಗಿವೆ. ವಾಟ್ಸಪ್ ಯುಗದಲ್ಲಿ ಮೊಬೈಲ್‍ನಲ್ಲಿ ಸೀಮಿತವಾಗಿ ಈಗ ಚಳುವಳಿಗಳಿಗೆ ಜಾತಿ ಅಂಟಿಕೊಂಡಿದೆ, ಅದರಂತೆ ದಲಿತ ಚಳುವಳಿಯಲ್ಲಿ ಸಹ ಒಳ ಮೀಸಲಾತಿ ಬಂದು ಹೋರಾಟ ಹಳಿ ತಪ್ಪಿದೆ ಎಂದರು.

ಜಿ.ಎನ್. ಚಂದ್ರಶೇಖರ ನಿರೂಪಿಸಿದರು. ಟಿ.ಎಸ್. ಪದ್ಮನಾಭ ನಿರ್ವಹಿಸಿದರು. ಗೌಡಗೆರೆ ಮಾಯಶ್ರೀ ವಂದಿಸಿದರು.

Related posts