ಹೊಸ ಸಿಜೆಐ: ನ್ಯಾಯಮೂರ್ತಿ ಸೂರ್ಯಕಾಂತ್ ಅವರೇ ಗವಾಯಿ ಅವರ ಉತ್ತರಾಧಿಕಾರಿ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ನವೆಂಬರ್‌ನಲ್ಲಿ ನಿವೃತ್ತಿ ಹೊಂದುತ್ತಿದ್ದು, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಸಿಜೆಐ ಗವಾಯಿ ಅವರು ನವೆಂಬರ್ 23 ರಂದು ನಿವೃತ್ತಿಯಾಗಲಿದ್ದು, ನ್ಯಾಯಮೂರ್ತಿ ಸೂರ್ಯಕಾಂತ್ ಹಿರಿತನದ ಆಧಾರದ ಮೇಲೆ ಭಾರತದ 53ನೇ ಮುಖ್ಯ ನ್ಯಾಯಮೂರ್ತಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಿಜೆಐ ಗವಾಯಿ ಅವರು ನ್ಯಾಯಮೂರ್ತಿ ಕಾಂತ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬರುವ ನಿರೀಕ್ಷೆಯಿದೆ. ನ್ಯಾಯಮೂರ್ತಿ ಕಾಂತ್ ಅವರು ಸುಮಾರು 14 ತಿಂಗಳುಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದು, ಫೆಬ್ರವರಿ 9, 2027 ರಂದು ನಿವೃತ್ತರಾಗಲಿದ್ದಾರೆ.

ಸಂಪ್ರದಾಯದಂತೆ, ಸಿಜೆಐ ಗವಾಯಿ ಅವರು ಶೀಘ್ರದಲ್ಲೇ ನ್ಯಾಯಮೂರ್ತಿ ಕಾಂತ್ ಅವರಿಗೆ ಶಿಫಾರಸು ಪತ್ರದ ಪ್ರತಿಯನ್ನು ಹಸ್ತಾಂತರಿಸಲಿದ್ದಾರೆ. ಕೇಂದ್ರ ಸರ್ಕಾರವು ಗವಾಯಿ ಅವರನ್ನೇ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಸೂಚಿಸಲು ವಿನಂತಿಸಿತ್ತು. ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಿಜೆಐ ಗವಾಯಿ, “ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ಹುದ್ದೆಯನ್ನು ವಹಿಸಿಕೊಳ್ಳಲು ಅತ್ಯಂತ ಯೋಗ್ಯರು” ಎಂದು ಹೇಳಿದ್ದಾರೆ.

Related posts