102 ಕೋಟಿ ಹಣ ಪತ್ತೆ ಪ್ರಕರಣ: ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಗುತ್ತಿಗೆದಾರರ ಬಳಿ ಈಚೆಗೆ ಸಿಕ್ಕಿದ 102 ಕೋಟಿ ಹಣಕ್ಕೆ ಸಂಬಂಧಿಸಿ ನೈತಿಕ ಹೊಣೆ ಹೊತ್ತು ಸಿಎಂ ಮತ್ತು ಡಿಸಿಎಂ ರಾಜೀನಾಮೆ ನೀಡಬೇಕು. ಈ ಹಣ ಯಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಹಿರಂಗಪಡಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಬಂದಿದ್ದಾರೆ. ಇವರಿಬ್ಬರು ಬಂದ ತಕ್ಷಣ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷಕ್ಕೆ ಗುರಿ ನಿಶ್ಚಯ ಮಾಡಲು ಬಂದಿದ್ದಾರೆಂದು ಮಾತನಾಡುತ್ತಾರೆ. ಪಂಚ ರಾಜ್ಯಗಳಿಗೆ ಚುನಾವಣೆ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಗುರಿ ನಿಗದಿಪಡಿಸಲು ಬಂದಿದ್ದಾರೆ ಎಂದು ಜನರು ಮಾತನಾಡುತ್ತಿದ್ದು, ಇದಕ್ಕೆ ಕಾಂಗ್ರೆಸ್ಸಿಗರು ಉತ್ತರ ಕೊಡಬೇಕೆಂದು ಆಗ್ರಹಿಸಿದರು.

ಅವರು ಬಂದು ಹೋಗಿ ಕೆಲವೇ ದಿನಗಳಲ್ಲಿ ಇಬ್ಬರು ಗುತ್ತಿಗೆದಾರರ ಮನೆಗಳಲ್ಲಿ 102 ಕೋಟಿ ರೂ. ಹಣ ಸಿಕ್ಕಿತ್ತು. ಅದು ಕಾಂಗ್ರೆಸ್ಸಿನದೇ ಹಣ, ಸಿಎಂ, ಡಿಸಿಎಂ ಅವರೇ ಸಂಗ್ರಹಿಸಿದ ಹಣ, ಅದನ್ನು ಪಂಚರಾಜ್ಯಗಳ ಚುನಾವಣೆಗೆ ಸಂಗ್ರಹಿಸಿ ಕಳಿಸಲು ಇಡಲಾಗಿತ್ತು ಎಂದು ಜಗಜ್ಜಾಹೀರಾಗಿದೆ ಎಂದುರು. ಇವರು ಕನ್ನಡದ ಸಂಪತ್ತನ್ನು ರಕ್ಷಿಸುವುದಿಲ್ಲ; ಕನ್ನಡದ ಜಲ, ನೆಲ, ಭಾಷೆಯನ್ನು ರಕ್ಷಿಸುವುದಿಲ್ಲ. ಅದರ ಬಗ್ಗೆ ಮಾತನಾಡುವ ನೈತಿಕ ಸ್ಥೈರ್ಯ ಈ ಸರಕಾರಕ್ಕೆ ಇಲ್ಲ ಎಂದು ಟೀಕಿಸಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ. ಈಗ 2600 ಕ್ಯೂಸೆಕ್ಸ್ ನೀರನ್ನು ಪ್ರತಿದಿನ ಬಿಡಲಾಗುತ್ತಿದೆ. ಸುಪ್ರೀಂ ಕೋರ್ಟ್, ಪ್ರಾಧಿಕಾರದ ಮುಂದೆ ಯಾಕೆ ನೀರು ಬಿಡಲು ಅಸಾಧ್ಯ ಎಂದು ಸಮರ್ಪಕ ವಾದ ಮಂಡಿಸಲು ಇವರಿಂದ ಆಗುತ್ತಿಲ್ಲ. ತಮಿಳುನಾಡಿಗೆ ಸೋಲುವುದೇ ಇವರ ಕೆಲಸ ಎಂದು ಆಕ್ಷೇಪಿಸಿದರು.

ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಮಾಡಿದರು. ಮೇಕೆದಾಟು ವಿಚಾರ ಈಗ ಮಾತನಾಡುತ್ತಿಲ್ಲ ಯಾಕೆ? ತಮಿಳುನಾಡು ಒಪ್ಪಿಗೆ ಕೊಡಬೇಕೆಂಬ ಯೋಚನೆಯಿಂದ ಈಗ ಸಿಎಂ, ಡಿಸಿಎಂ ತೆಪ್ಪಗೆ ಇದ್ದಾರೆ. ಇದರ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದರು.

ಈಗ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಬಂದಿದ್ದಾರೆ. ಸಚಿವ ಸ್ಥಾನ ಸಿಗದೆ ಬೇಸರ ವ್ಯಕ್ತಪಡಿಸುವವರನ್ನು ಸಮಾಧಾನ ಪಡಿಸಲು ನಿಗಮ, ಮಂಡಳಿ ಅಧ್ಯಕ್ಷತೆಗೆ ಶಾಸಕರನ್ನು ನೇಮಿಸಲು ಇವರು ಬಂದಿದ್ದಾರೆ. ಬಹುಶಃ ನಿಗಮಗಳಿಗೆ ಇಷ್ಟು ಎಂದು ಗುರಿ ನಿರ್ಧರಿಸಲು ಬಂದಿರಬೇಕು. ಇದನ್ನು ಸ್ಪಷ್ಟಪಡಿಸಿ ಎಂದು ರವಿಕುಮಾರ್ ಸವಾಲೆಸೆದರು.

ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಇದನ್ನು ಶಮನ ಮಾಡಲು ಡಿ.ಕೆ.ಶಿವಕುಮಾರರು ಬೆಳಗಾವಿಗೆ ಹೋಗುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಪರಮೇಶ್ವರರ ಮನೆಗೆ ಹೋಗುತ್ತಾರೆ. ಬೆಳಗಾವಿಗೆ ಹೋದ ಸಂದರ್ಭದಲ್ಲಿ ಒಬ್ಬ ಶಾಸಕರೂ ಡಿ.ಕೆ.ಶಿವಕುಮಾರರ ಸ್ವಾಗತಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಅವರು ಗೃಹ ಸಚಿವ ಪರಮೇಶ್ವರರ ಮನೆಗೆ ಹೋದಾಗ ಡಿ.ಕೆ.ಶಿವಕುಮಾರರು ಬೆಂಗಳೂರಿನಲ್ಲೇ ಇದ್ದರೂ ಅವರನ್ನು ಊಟಕ್ಕೆ ಕರೆದಿಲ್ಲ. ಹೀಗೆ ಆಂತರಿಕ ಕಲಹ, ಗುದ್ದಾಟ ಮುಗಿಲು ಮುಟ್ಟಿದೆ ಎಂದು ಟೀಕಿಸಿದರು.

ನಮ್ಮ ರಮೇಶ ಜಾರಕಿಹೊಳಿ ಅವರು ಹೇಳಿದ್ದು ಸತ್ಯವಾಗಿದೆ. ಈ ಸರ್ಕಾರ ಏನು ಬೇಕಾದರೂ ಆಗಬಹುದೆಂದು ಸರಿಯಾಗಿಯೇ ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಬ್ಬರು ಬಂದಿರುವುದು ಕರ್ನಾಟಕಕ್ಕೆ ಅತ್ಯಂತ ನಾಚಿಕೆಗೇಡಿನ ವಿಚಾರ. ಕರ್ನಾಟಕಕ್ಕೆ ಲೂಟಿ ಮಾಡಲು, ಗುರಿ ನಿರ್ಧರಿಸಲು ಬಂದಿದ್ದಾರೆ ಎಂದು ಪುನರುಚ್ಚರಿಸಿದರು.

Related posts