ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆದ ಸುದ್ದಿ ಹರಿದಾಡಿ, ಜೆಜೆ ನಗರ ಉದ್ವಿಗ್ನಗೊಂಡಿದೆ. ಭಾನುವಾರ ರಾತ್ರಿ 8-30 ಗಂಟೆ ಸುಮಾರಿಗೆ ವಿಎಸ್ ಗಾರ್ಡನ್ ಬಳಿ ಮಾಲಾಧಾರಿಗಳು ಕೈಂಕರ್ಯದಲ್ಲಿ ನಿರತರಾಗಿದ್ದಾಗ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಓಂ ಶಕ್ತಿ ಮಾಲಾಧಾರಿ ಯುವತಿಯರ ತಲೆಗೆ ಕಲ್ಲೇಟು ತಗುಲಿ ಗಾಯಗಳಾಗಿವೆ. ಕೂಡಲೇ ಅವರನ್ನು ದಾಖಲಿಸಲಾಗಿದೆ ಎನ್ನಲಾಗಿದೆ. ಕಲ್ಲು ತೂರಾಟದ ಘಟನೆಯಿಂದ ಕೆರಳಿದ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಸ್ಟೇಷನ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಕಿಡಿಗೇಡಿಗಳನ್ನ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಹರಸಾಹಸಪಟ್ಟ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ಸಂಬಂಧ ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
