ಹಿರಿಯ ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ ನಿಧನ

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ಮಂಗಳವಾರ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ಪಾರ್ಥಿವ ಶರೀರವನ್ನು ಪುಣೆಯ ಎರಾಂಡ್‌ವಾನೆಯಲ್ಲಿರುವ ಕಲ್ಮಾಡಿ ಹೌಸ್‌ನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಮಧ್ಯಾಹ್ನ 3.30ಕ್ಕೆ ವೈಕುಂಠ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಪ್ರತಿಷ್ಠಿತ ಬಸ್‌ಗಳ ಪ್ರಯಾಣದರಗಳಲ್ಲಿ ರಿಯಾಯಿತಿ

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ಪ್ರತಿಷ್ಠಿತ ಸಾರಿಗೆಗಳ ಪ್ರಯಾಣದರಗಳಲ್ಲಿ ಶೇಕಡಾ 5 ರಿಂದ 15ರವರೆಗೆ ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿ ಜನವರಿ 5, 2026ರಿಂದ ಜಾರಿಗೆ ಬರಲಿದೆ. ಬೆಂಗಳೂರು–ಮಂಗಳೂರು, ಬೆಂಗಳೂರು–ಕುಂದಾಪುರ, ಉಡುಪಿ, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಪುತ್ತೂರು, ಮಡಿಕೇರಿ/ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ/ಸಾಗರ ಸೇರಿದಂತೆ ಚೆನ್ನೈ, ಹೈದರಾಬಾದ್/ಸಿಕಂದರಾಬಾದ್, ತಿರುಪತಿ, ಮಂತ್ರಾಲಯ, ಪುಣೆ/ಮುಂಬೈ, ವಿಜಯವಾಡ, ಎರ್ನಾಕುಲಂ, ಮದುರೈ, ಕೋಯಿಮತ್ತೂರು, ತಿರುಶೂರು ಸೇರಿದಂತೆ ಆಯ್ದ ಮಾರ್ಗಗಳಲ್ಲಿ ಈ ರಿಯಾಯಿತಿ ಅನ್ವಯವಾಗಲಿದೆ. ರಾಜಹಂಸ, ನಾನ್‌ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಹಾಗೂ ಮಲ್ಟಿ ಆಕ್ಸಲ್ ಎಸಿ ಸ್ಲೀಪರ್ ಬಸ್‌ಗಳ ಪ್ರಯಾಣದರಗಳಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದು ನಿಗಮ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ksrtc.in ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ನಿಗಮ ಮನವಿ ಮಾಡಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.