27 ಹಕ್ಕುದಾರರಿರುವ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬನ ಸಹಿಯಿಂದ ಪಡೆದರೇ ಸಿಎಂ ಸಿದ್ದರಾಮಯ್ಯ?

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದಕ್ಕೆ 27 ಹಕ್ಕುದಾರರಿದ್ದರೂ ಕೇವಲ ಒಬ್ಬರ ಬಳಿ ಸಹಿ ಹಾಕಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ಅಕ್ರಮ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಜಮೀನಿನ ಮೂಲ ಹಕ್ಕುದಾರರು, ಇತಿಹಾಸದ ಕುರಿತು ವಿವರಿಸಿದರು. ಸಿಎಂ ಸಿದ್ದರಾಮಯ್ಯ ಖರೀದಿಸಿದ ಜಾಗ ನಿಂಗ ಎಂಬುವರಿಗೆ ಸೇರಿದ ಜಮೀನಾಗಿದ್ದು, 1936 ರಲ್ಲಿ ನಿಂಗ ಜಮೀನು ಖರೀದಿಸಿದ್ದರು. ಅವರು 28 ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪತ್ನಿ ನಿಂಗಮ್ಮ 1990 ರಲ್ಲಿ ಮೃತರಾಗಿದ್ದರು. ಇದು ನಿಂಗ ಮತ್ತು ನಿಂಗಮ್ಮ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಾಗಿದೆ. ನಿಂಗ ಅವರಿಗೆ ಮೂರು ಮಕ್ಕಳಿದ್ದು, ಅವರ ಕುಟುಂಬದವರು 27 ಜನರಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ದೇವರಾಜು ಎಂಬ ಒಬ್ಬ ವ್ಯಕ್ತಿಯಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ವಿವರಿಸಿದರು.

1968 ರಲ್ಲಿ ಸರ್ವೆ ಸಂಖ್ಯೆ 464 ರಲ್ಲಿ ನಿಂಗ ಅವರ ಪುತ್ರ ಮಲ್ಲಯ್ಯ ಅವರ ಹೆಸರಿಗೆ ಈ ಜಮೀನು ನೋಂದಣಿಯಾಗಿತ್ತು. 1990 ರಲ್ಲಿ ಒಟ್ಟು 462 ಎಕರೆ ಜಮೀನಿನಲ್ಲಿ ದೇವನೂರು ಬಡಾವಣೆ ಮುಡಾ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಬಳಿಕ ಜಮೀನು ಸಂಬಂಧ ದೇವರಾಜು ಅವರಿಗೆ ಮುಡಾದಿಂದ 3 ಲಕ್ಷ ರೂ. ಅವಾರ್ಡ್ ನೀಡಲಾಗಿತ್ತು. ಈ ಅವಾರ್ಡ್ ನೋಟಿಸ್ಗೆ ಮಲ್ಲಯ್ಯ ಸಹಿ ಹಾಕಿದ್ದರು. ನಂತರ 1998 ರಲ್ಲಿ ಮುಡಾ ಸರ್ವೆ ಸಂಖ್ಯೆ 464 ನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿತ್ತು ಎಂದು ತಿಳಿಸಿದರು.

ಈ ಜಮೀನು 1998 ರಲ್ಲಿ ಮುಡಾದಿಂದ ಡಿ ನೋಟಿಫಿಕೇಶನ್‌ ಆಗಿತ್ತು. ಆಗ ಸಿದ್ದರಾಮಯ್ಯನವರೇ ಉಪಮುಖ್ಯಮಂತ್ರಿಯಾಗಿದ್ದರು. ತಂದೆ ತಾಯಿ ಸತ್ತ ನಂತರ ಕುಟುಂಬದ ಎಲ್ಲರ ಸಹಿ ಪಡೆಯಬೇಕಾಗುತ್ತದೆ. 2004 ರಲ್ಲಿ ದೇವರಾಜು ಅವರಿಂದ ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ 3 ಎಕರೆ 16 ಗುಂಟೆ ಜಮೀನನ್ನು ಕ್ರಯಕ್ಕೆ ಪಡೆದು ಕಾನೂನು ಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿದ್ದರು. 2005 ರಲ್ಲಿ ಇದು ಭೂ ಪರಿವರ್ತನೆಯಾಯಿತು. 2001 ರಲ್ಲೇ ಬಡಾವಣೆ ಮಾಡಲು ಇದನ್ನು ಎಲ್‌ಆಂಡ್‌ಟಿ ಗೆ ನೀಡಲಾಗಿತ್ತು. ಅದಾದ ನಂತರ ಈ ಜಮೀನು ಪರಿವರ್ತನೆಯಾಗಿದೆ ಎಂದು ಹೇಳಿದರು.

ಈ ಜಮೀನು ಮೂಲೆಯಲ್ಲಿದ್ದುದರಿಂದ ಇದು ಬೇಕಿಲ್ಲ ಎಂದು ಕೈ ಬಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದು ಮಧ್ಯಭಾಗದಲ್ಲಿ ಬರುತ್ತದೆ. ದಲಿತ ವ್ಯಕ್ತಿ ನಿಂಗನಿಗೆ ಸೇರಿದ ಜಮೀನಿನ ದಾಖಲೆಗಳ ವಿವರ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದ ಸಿದ್ದರಾಮಯ್ಯನವರಿಗೆ ತಿಳಿಯಲೇ ಇಲ್ಲ. ಈ ಜಮೀನನ್ನು ಸಿದ್ದರಾಮಯ್ಯ ಪತ್ನಿಗೆ ಭಾವ ಅರಿಶಿನ ಕುಂಕುಮಕ್ಕೆ ನೀಡಿದ್ದಾರೆ. ಇದು ಪೂರ್ವ ಯೋಜಿತ ಅಕ್ರಮವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಪತ್ನಿ 2014 ರಲ್ಲಿ ಮುಡಾಗೆ ಪತ್ರ ಬರೆದು ಬದಲಿ ಪರಿಹಾರ ಜಮೀನು ನೀಡುವಂತೆ ಕೋರಿದ್ದರು. ಇದಕ್ಕೆ ಉತ್ತರ ಬರೆದ ಮುಡಾ ಆಯುಕ್ತರು, ಬದಲಿ ಜಮೀನು ಇಲ್ಲವೆಂದು, ಅದಕ್ಕೆ ತತ್ಸಮಾನ ಜಮೀನು ನೀಡಲಾಗುವುದು ಎಂದು ತಿಳಿಸುತ್ತಾರೆ. ನಂತರ 2014 ರಲ್ಲಿ 50:50 ವಿಧಾನದಲ್ಲಿ ಪರಿಹಾರ ನೀಡಲಾಯಿತು. 2023 ರಲ್ಲಿ ನಗರಾಭಿವೃದ್ಧಿ ಇಲಾಖೆ ಇವೆಲ್ಲವೂ ನಿಯಮಬಾಹಿರ ಎಂದು ಆದೇಶ ಮಾಡಿತ್ತು ಎಂದರು.

ಈ ಜಮೀನಿನ ಮಾಲಿಕತ್ವದ ವಿಷಯದಲ್ಲೇ ಇನ್ನೂ ತೀರ್ಮಾನ ಆಗಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು ಅದನ್ನು ಪರಿಶೀಲಿಸಿಲ್ಲ. ಈ ಜಮೀನನ್ನು ಮೃತರಾದ ನಿಂಗ ಅವರ ಹೆಸರಿನಲ್ಲಿ ಡಿ ನೋಟಿಫೈ ಮಾಡಿದ್ದಾರೆ. ಬದಲಿ ಜಮೀನು ಪರಿಹಾರ ನೀಡುವುದಾದರೆ ಅದೇ ಜಾಗದಲ್ಲಿ ನಿವೇಶನ ನೀಡಬೇಕು. ಆದರೆ ಬೆಲೆಬಾಳುವ ಸೈಟುಗಳನ್ನು ನೀಡಿದ್ದಾರೆ. ಇದಕ್ಕೆ ಅಧಿಕಾರಿಗಳ ಮೇಲೆ ಯಾರು ಒತ್ತಡ ಹೇರಿದ್ದಾರೆ? ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ರಾಜಕೀಯದಲ್ಲಿ ಕ್ಲೀನ್‌ ಎಂದು ಹೇಳಿ, ಕ್ಲೀನ್‌ ಆಗಿ 14 ಸೈಟುಗಳನ್ನು ನುಂಗಿದ್ದಾರೆ. ಈ ಹಿಂದೆ ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗ ನೇಮಿಸಿ ಆರು ವರ್ಷ ಕಳೆದರೂ ವರದಿ ಬರಲಿಲ್ಲ. ಅದೇ ತಂತ್ರವನ್ನು ಪ್ರಯೋಗಿಸಿ ದೇಸಾಯಿ ಆಯೋಗ ರಚಿಸಿದ್ದು, ಇದಕ್ಕೆ 60 ವರ್ಷ ಅವಧಿ ನೀಡುತ್ತಾರಾ ಎಂದು ಸ್ಪಷ್ಟಪಡಿಸಬೇಕು ಎಂದರು.

ಕ್ಲೀನ್‌ ಎಂಬ ಪಟ್ಟವನ್ನು ರಾಜ್ಯ ಜನರು ನೀಡಬೇಕಿದ್ದರೂ, ಮುಖ್ಯಮಂತ್ರಿಯವರು ತಮ್ಮನ್ನು ತಾವೇ ಕ್ಲೀನ್‌ ಎಂದು ಹೇಳಿಕೊಳ್ಳುತ್ತಿದ್ದಾರೆ. ಸದನದಲ್ಲಿ ಮಾತನಾಡಿದ್ದನ್ನು ಮರುದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಾರೆ. ಹಣದ ಬಲ ಇದ್ದವರಿಗೆ ಮಾತ್ರ ಸದನದಲ್ಲಿ ಸ್ಥಾನ ಎಂದು ಅವರೇ ತೋರಿಸಿದಂತಾಗಿದೆ. ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

Related posts