ಕಲಬುರಗಿ: ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾದರೆ ರೈತರ ಆದಾಯವೂ ಹೆಚ್ಚುತ್ತದೆ. ಸ್ವಾಭಿಮಾನದ ಬದುಕು ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕಲಬುರಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ಸೇಡಂ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ “ 69ನೇ ಅಖಿಲ ಭಾರತ ಸಹಕಾರ ಸಪ್ತಾಹ – 2022”ನ್ನು ಉದ್ಘಾಟಿಸಿ ಮಾತನಾಡಿದರು.
32 ಲಕ್ಷ ರೈತರಿಗೆ 24 ಸಾವಿರ ಕೋಟಿ ರು. ಸಾಲವನ್ನು ನೀಡುವ ಗುರಿ ಸರ್ಕಾರ ಹೊಂದಿದೆ. ಕೃಷಿ ಮೇಲಿನ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪೂರ್ಣ ಗಣಕೀಕರಣ ಮಾಡಲು ತೀರ್ಮಾನಿಸಲಾಗಿದ್ದು, ಸರ್ಕಾರ 45 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ರೈತರ ಖಾತೆಗೆ ನೇರವಾಗಿ ಹಣ ಪಾವತಿಯಾಗಲು ಈ ಗಣಕೀರಣದಿಂದ ಅನುಕೂಲವಾಗಲಿದೆ ಎಂದರು.
ರೈತರಿಗೆ ಆರೋಗ್ಯ ಸಮಸ್ಯೆಗಳಿಂದ ಸಂರಕ್ಷಣೆ ನೀಡಲು ಜಾರಿಗೊಳಿಸಿದ ಯೋಜನೆ ಯಶಸ್ವಿನಿ. ರೈತರು ಅನಾರೋಗ್ಯದಿಂದ ಬಳಲುವಂತಾದಾಗ ಅಲ್ಲಲ್ಲಿ ಅಲೆದಾಡುವ ಬದಲು ಕ್ಷಿಪ್ರ ಪರಿಹಾರ ಪಡೆಯಲು ಯಶಸ್ವಿನಿ ಯೋಜನೆ ನೆರವಾಗುತ್ತದೆ. pic.twitter.com/SGh2sjx9WT
— Basavaraj S Bommai (Modi Ka Parivar) (@BSBommai) November 14, 2022
ರೈತರ ಆರೋಗ್ಯ ಹಿತರಕ್ಷಣೆಗೆ ಯಶಸ್ವಿನಿ ಮತ್ತೆ ಪ್ರಾರಂಭ:
ರೈತರ ಆರೋಗ್ಯ ಹಿತರಕ್ಷಣೆಗೆ ಯಶಸ್ವಿನಿ ಯೋಜನೆ ಪ್ರಾರಂಭಿಸಲಾಯಿತು. ಇದರಿಂದ ಆಸ್ಪತ್ರೆಯಲ್ಲಿ ತ್ವರಿತ ಚಿಕಿತ್ಸೆ ದೊರೆಯುತ್ತದೆ. ಈ ವರ್ಷ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆಗೆ 300 ಕೋಟಿಯನ್ನು ಇಡಲಾಗಿದೆ. ಯಶಸ್ವಿನಿ ಯೋಜನೆಯಿಂದ ಚಿಕಿತ್ಸೆಗೆ ಅಲೆದಾಟ ತಪ್ಪಿಸಲಿದೆ. ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಲಾಭವನ್ನು ಪಡೆಯಬಹುದಾಗಿದ್ದು, ಹೃದಯ, ಕಿಡ್ನಿ, ಕ್ಯಾನ್ಸರ್ ಕಾಯಿಲೆಗಳ ಚಿಕಿತ್ಸೆಯೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ನವೆಂಬರ್ ಒಂದರನ್ನು ನೋಂದಣಿ ಪ್ರಾರಂಭವಾಗಿದ್ದು, ಡಿಸೆಂಬರ್ ವರೆಗೆ ನೋಂದಣಿಯಾಗಲಿದೆ. ಜನವರಿಯಿಂದ ಮುಂದಿನ ಒಂದು ವರ್ಷದವರೆಗೂ ಟ್ರಸ್ಟಿನ ಮೂಲಕ ರೈತರಿಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ. ರೈತರಿಗೆ ಸ್ಪಂದಿಸುವ ಮಹತ್ವದ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಬಜೆಟ್ಟಿನಲ್ಲಿ ಹಣ ಮೀಸಲಿರಿಸಿ ಪುರಸ್ಕರಿಸಿದೆ. ರೈತರ ಪರವಾದ ಸರ್ಕಾರದಿಂದ ಮಾತ್ರ ಇದು ಸಾಧ್ಯ ಎಂದರು.