ಸಿಎಂ ಜನತಾ ದರ್ಶನದಲ್ಲಿ ಖಾಕಿ ಅಮಾನವೀಯ ನಡೆ; ಬಿಜೆಪಿ ಆಕ್ರೋಶ

ಬೆಂಗಳೂರು: ಮುಖ್ಯಮಂತ್ರಿಯವರ ಜನತಾದರ್ಶನದಲ್ಲಿ ಸರ್ಕಾರ ನಿರುದ್ಯೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

545 ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹುದ್ದೆಗಳ ಮರು ಪರೀಕ್ಷೆಗೆ ಅತ್ಯಂತ ಕಡಿಮೆ ಕಾಲಾವಕಾಶವನ್ನು ನಿಗದಿಪಡಿಸಿರುವ ಸರ್ಕಾರದ ಅವೈಜ್ಞಾನಿಕ ನಿರ್ಧಾರವನ್ನು ಪ್ರತಿಭಟಿಸಿ, ಪರೀಕ್ಷಾ ದಿನಾಂಕವನ್ನು ಮುಂದೂಡಿ ಸಮಯ ವಿಸ್ತರಿಸುವಂತೆ ಜನತಾ ದರ್ಶನದಲ್ಲಿ ಮನವಿ ಮಾಡಲು ಮುಖ್ಯಮಂತ್ರಿಗಳ ಬಳಿಗೆ ತೆರಳಿದ್ದ ಪರೀಕ್ಷಾರ್ಥಿ ನಿರುದ್ಯೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಂಡು ಪೊಲೀಸ್ ಬಂಧನಕ್ಕೆ ಒಳಪಡಿಸಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದವರು ಹೇಳಿದ್ದಾರೆ.

ಪರೀಕ್ಷಾ ಹಗರಣದಿಂದ ಈ ಮೊದಲೇ ಹೈರಾಣಾಗಿ ಹೋಗಿದ್ದ ಪಿಎಸ್ಐ ಹುದ್ದೆ ಆಕಾಂಕ್ಷಿಗಳ ಮನವಿ ಅತ್ಯಂತ ನ್ಯಾಯ ಸಮ್ಮತವಾಗಿದ್ದು, ಇದನ್ನು ಮುಖ್ಯಮಂತ್ರಿಗಳು ಸಹಾನುಭೂತಿಯಿಂದ ಪರಿಶೀಲಿಸಬೇಕಿತ್ತು. ಆದರೆ ಪೊಲೀಸರನ್ನು ಬಿಟ್ಟು ಬಂಧಿಸಿದ ಕ್ರಮ ಕಾಂಗ್ರೆಸ್ ಸರ್ಕಾರಕ್ಕೆ, ಅಮಾಯಕ ನಿರುದ್ಯೋಗಿಗಳ ಮೇಲೆ ಇರುವ ತಾತ್ಸಾರ ಧೋರಣೆಯನ್ನು ಪ್ರತಿಬಿಂಬಿಸಿದೆ ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಪಿಎಸ್ಐ ಹುದ್ದೆ ಆಕಾಂಕ್ಷಿಗಳ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಸರ್ಕಾರ ಈ ಕೂಡಲೇ ಪರೀಕ್ಷೆಯನ್ನು ಮುಂದೂಡಿ ಸೂಕ್ತ ಕಾಲಾವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಪಿಎಸ್ಐ ಹುದ್ದೆ ಪರೀಕ್ಷಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಬಿಜೆಪಿ ಬೆಂಬಲಿಸುತ್ತದೆ ಎಂದೂ ವಿಜಯೇಂದ್ರ ಹೇಳಿದ್ದಾರೆ.

Related posts