6 ರಾಜ್ಯಗಳ 8 ಕ್ಷೇತ್ರಗಳಿಗೆ ಉಪಚುನಾವಣೆ: ಏಪ್ರಿಲ್ 9, 29ರಂದು ಮತದಾನ

ನವದೆಹಲಿ: ದೇಶದ ಆರು ರಾಜ್ಯಗಳ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಭಾರತ ಚುನಾವಣಾ ಆಯೋಗ ಪ್ರಕಟಿಸಿದೆ. ಏಪ್ರಿಲ್ 9 ಮತ್ತು 29ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದರು.

ಕರ್ನಾಟಕದಲ್ಲಿ ಬಾಗಲಕೋಟೆ (Bagalkote) ಮತ್ತು ದಾವಣಗೆರೆ ದಕ್ಷಿಣ (Davanagere South) ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಬಾಗಲಕೋಟೆ ಕ್ಷೇತ್ರವು ಮಾಜಿ ಸಚಿವ ಎಚ್. ವೈ. ಮೇಟಿ (H. Y. Meti) ಅವರ ನಿಧನದಿಂದ ತೆರವಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರವು ಹಿರಿಯ ರಾಜಕೀಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ನಿಧನದಿಂದ ಖಾಲಿಯಾಗಿತ್ತು. ಈ ಎರಡೂ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ.

ಈ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ ಮಾರ್ಚ್ 24 ಕೊನೆಯ ದಿನವಾಗಿದ್ದು, ನಂತರದ ಪ್ರಕ್ರಿಯೆಗಳನ್ನು ಅನುಸರಿಸಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದೇ ವೇಳೆ ದೇಶದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಜೊತೆಗೆ ಈ ಉಪಚುನಾವಣೆಗಳು ಕೂಡ ನಡೆಯಲಿವೆ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು:

  • ಕರ್ನಾಟಕ: ಬಾಗಲಕೋಟೆ, ದಾವಣಗೆರೆ ದಕ್ಷಿಣ
  • ಮಹಾರಾಷ್ಟ್ರ : ರಾಹೂರಿ, ಬಾರಾಮತಿ
  • ಗೋವಾ : ಪೋಂಡಾ
  • ಗುಜರಾತ್: ಉಮ್ರದ್
  • ನಾಗಾಲ್ಯಾಂಡ್: ಕೋರಿಡಾಂಗ್ (ಎಸ್‌ಟಿ)
  • ತ್ರಿಪುರ: ಧರ್ಮನಗರ

ಈ ಎಲ್ಲಾ ಕ್ಷೇತ್ರಗಳಿಗೂ ಏಪ್ರಿಲ್ 9 ಮತ್ತು 29ರಂದು ಮತದಾನ ನಡೆಯಲಿದ್ದು, ಮೇ 4ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Related posts