ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಪ್ರಥಮ: ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಂತಸ

ಬೆಂಗಳೂರು: ಎಸ್‍ಎಸ್‍ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನಕ್ಕೆ ಬಂದಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಹೊಸ ದಾಖಲೆ ಬರೆದಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಶ್ಲಾಘಿಸಿದ್ದಾರೆ.

ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕಳೆದ ವರ್ಷ 20 ನೇ ಸ್ಥಾನದಲ್ಲಿತ್ತು. ಆಗ ನಾನಿನ್ನೂ ಶಾಸಕನಾಗಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುತ್ತಿದ್ದೆ. ಇನ್ನು ಮುಂದೆ ಕನಿಷ್ಠ 10 ಸ್ಥಾನಗಳ ಒಳಗೆ ಬರಬೇಕು ಎಂದು ಹೇಳಿದ್ದೆ. ಆದರೆ ಈ ಬಾರಿ ಜಿಲ್ಲೆಯು ಮೊದಲ ಸ್ಥಾನ ಗಳಿಸಿದೆ. ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಅಧಿಕಾರಿಗಳಿಗೆ ಶುಭ ಕೋರುತ್ತೇನೆ ಎಂದರು. ಅನುತ್ತೀರ್ಣರಾದವರು ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ. ಅವರಿಗೆ ಮತ್ತೆ ಅವಕಾಶ ಇದೆ ಎಂದು ಅವರು ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ 3,000 ವಿಶೇಷ ವಿದ್ಯಾರ್ಥಿಗಳನ್ನು ಗುರುತಿಸಲಾಗಿತ್ತು. ನಂತರ ಅವರಿಗೆ ವಿಷಯವಾರು 9 ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅಭ್ಯಾಸ ಮಾಡಿಸಲಾಗಿತ್ತು. ‘ಟೆನ್ ಟೈಮ್ಸ್ ಪ್ರಾಕ್ಟೀಸ್’ ಕ್ರಮವನ್ನು ಜಾರಿ ಮಾಡಲಾಗಿತ್ತು ಎಂದು ಸಚಿವ ಡಾ.ಕೆ.ಸುಧಾಕರ್ ವಿವರಿಸಿದರು.

Related posts