ಗೇಮಿಂಗ್, ಅನಿಮೇಶನ್ ಕ್ಷೇತ್ರದಲ್ಲಿ ಹೂಡಿಕೆಗೆ ಕರ್ನಾಟಕದಲ್ಲಿ ವಿಪುಲ ಅವಕಾಶ; ಶೆಟ್ಟರ್

ಬೆಂಗಳೂರು: : ಗೇಮಿಂಗ್ ಮತ್ತು ಅನಿಮೇಶನ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಕರ್ನಾಟಕದಲ್ಲಿ ವಿಪುಲ ಅವಕಾಶವಿದೆ. ಇದಕ್ಕೆ ಪೂರಕವಾದ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ಸಿಐಐ ಇಂದು ಏರ್ಪಡಿಸಿದ್ದ ಜಾಗತಿಕ ಅನಿಮೇಷನ್, ವಿಎಫ್ಎಕ್ಸ್, ಗೇಮಿಂಗ್ & ಕಾಮಿಕ್ಸ್ ಕುರಿತಾದ ವೆಬಿನಾರ್ ನಲ್ಲಿ ಪಾಲ್ಗೊಂಡು ಅವರು. ಕರ್ನಾಟಕದಲ್ಲಿ ಎವಿಜಿಸಿ ಕ್ಷೇತ್ರದ ಅವಕಾಶಗಳ ಅನ್ವೇಷಣೆ ಕುರಿತಾಗಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅನಿಮೇಷನ್ ಉದ್ಯಮ ಸ್ಥಿರವಾದ ಬೆಳವಣಿಗೆಯನ್ನು ಕಾಣುತ್ತಿದೆ ಮತ್ತು ಅತ್ಯಂತ ಹೆಚ್ಚು ಅವಕಾಶ ಹೊಂದಿರುವ ಕ್ಷೇತ್ರವಾಗಿದೆ. ಇದರ ಪರಿಣಾಮ ಭಾರತಕ್ಕೆ ಅನಿಮೇಷನ್ ತಂತ್ರಜ್ಞಾನದ ಅರಿವು ನಿರಂತರವಾಗಿ ಸಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕವು ಹೈಟೆಕ್ ಉದ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ಇದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಂತರಿಕ್ಷ ಮತ್ತು ಇತರೆ ತಂತ್ರಜ್ಞಾನ ಆಧಾರಿತ ಕ್ಷೇತ್ರಗಳ ಮೂಲಕ ದೇಶದ ಆದಾಯಕ್ಕೆ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಅನಿಮೇಷನ್ ಮತ್ತು ಗೇಮಿಂಗ್ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರ ಎಂಬುದನ್ನು ಪರಿಗಣಿಸಿದ ಮೊದಲ ರಾಜ್ಯವೆಂದರೆ ಕರ್ನಾಟಕ. ಅಲ್ಲದೇ, ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರತ್ಯೇಕ ನೀತಿಯನ್ನೂ ಜಾರಿಗೆ ತಂದಿರುವ ಮೊದಲ ರಾಜ್ಯವೂ ಕರ್ನಾಟಕವಾಗಿದೆ ಎಂದರು.

Related posts