ಬೆಂಗಳೂರು: ನಾವು ಆಹಾರ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಿ ಆಹಾರ ಭದ್ರತೆ ಸಾಧಿಸಿದ್ದೇವೆ. ಆದರೆ ಪೌಷ್ಟಿಕಾಂಶ ಭದ್ರತೆಯಲ್ಲಿ ಹಿಂದುಳಿದಿದ್ದೇವೆ. ಭಾರತ ಈಗಲೂ ಅಪೌಷ್ಟಿಕತೆ ನಿವಾರಣೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ ಎಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಡಾ. ಉಷಾ ರವೀಂದ್ರ ಹೇಳಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾಶಾಖೆ –ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಆಯೋಜಿಸಿದ್ದ ‘ಪೌಷ್ಟಿಕ ಸಸಿವನ’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೈತೋಟ, ತಾರಸೀ ತೋಟ, ಹಾಗು ಸ್ವಲ್ಪ ಜಾಗದಲ್ಲಿ ಮಣ್ಣಿದ್ದರೆ ಸೊಪ್ಪುಗಳನ್ನು ಬೆಳೆಸಿ ನಮ್ಮ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಬಹುದು ಎಂದರು. ನಗರಗಳಲ್ಲಿ ವಾಸಮಾಡುವವರು ಮನೆಯ ಬಳಿ ಮಣ್ಣಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ಸುಲಭವಾಗಿ ಸಿಗುವ ಸಣ್ಣ ಪ್ಲಾಸ್ಟಿಕ್ ಡಬ್ಬಿಗಳಲ್ಲೂ ಕೊತ್ತಂಬರಿ, ಬಸಳೆ, ಚಕ್ರಮುನಿ ಮೊದಲಾದ ಸೊಪ್ಪುಗಳನ್ನು ಬೆಳೆದು ಪೋಷಕಾಂಶದ ಅಗತ್ಯವನ್ನು ಪೂರೈಸಿಕೊಳ್ಳಬಹುದು ಎಂದರು.
ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಪೌಷ್ಟಿಕ ತೋಟ ಬೆಳೆಸಿದಲ್ಲಿ ಕೇವಲ ಪೋಷಕಾಂಶ ಅಗತ್ಯವಷ್ಟೇ ಅಲ್ಲ ದಿನನಿತ್ಯ ಶರೀರಕ್ಕೆ ಅಗತ್ಯವಾದ ವ್ಯಾಯಮ ದೊರೆಯುತ್ತದೆ ಪ್ಲಾಸ್ಟಿಕ್ ಕವರ್,ಡಬ್ಬಿಗಳ ಬಳಕೆ ಮಾಡಿ ಗಿಡ ಬೆಳೆಸುವುದರಿಂದ ಪ್ಲಾಸ್ಟಿಕ್, ಭೂಮಿ ಸೇರುವುದನ್ನು ತಡೆಯಬಹುದು ಎಂದರು.
ಆಹಾರ ತಜ್ಞರಾದ ಡಾ. ಕೆ.ಸಿ. ರಘು ತಮ್ಮದೇ ಆದ ಅಭಿಪ್ರಾಯ ಮಂಡಿಸಿದರು. ಎಲ್ಲ ಬಗೆಯ ಆಹಾರ ಸೇವನೆ ಅತ್ಯಗತ್ಯ. ಬಿಳಿ ಬಣ್ಣಕ್ಕೆ ಮಾರು ಹೋಗುವ ನಮ್ಮ ಮಾನಸಿಕ ಅವಲಂಬನೆ ತಪ್ಪಿದರೆ ಬರೀ ಅನ್ನ ತಿನ್ನುವ ಪರಿಪಾಠ ತಪ್ಪುತ್ತದೆ. ಈಗ ನಾವು ತಿನ್ನುವ ಪಾಲಿಷ್ ಮಾಡಿದ ಅಕ್ಕಿ ಅಥವಾ ಸಂಸ್ಕರಿತ ಆಹಾರ, ಸಕ್ಕರೆಯ ಹೆಚ್ಚಾದ ಬಳಕೆ ಇವುಗಳಿಂದ ಬೊಜ್ಜು ಬರುತ್ತಿದೆ. ದೇಹದಲ್ಲಿನ ಸುಮಾರು 19 ಸೂಕ್ಷ್ಮ ಜೀವಿಗಳಿಗೆ ಕೆಲಸವೇ ಇಲ್ಲದಂತಾಗಿದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದೇಹಕ್ಕೆ ಎಲ್ಲ ರಸರುಚಿಗಳ ಅವಶ್ಯಕತೆಯಿದೆ. ರಸಕ್ಕೂ ಪೌಷ್ಟಿಕಾಂಶಕ್ಕೂ ಸಂಬಂಧವಿದೆ. ಆದುದರಿಂದ ರುಚಿಕರ, ಪೌಷ್ಟಿಕಾಂಶಭರಿತ ಆಹಾರಸೇವನೆಗೆ ನಾವು ಗಮನಕೊಡಬೇಕು ಎಂದರು.