ಬೆಂಗಳೂರು: ಲಾಕ್’ಡೌನ್ ಕಾರಣದಿಂದ ಕಳೆದ ಹಲವು ತಿಂಗಳಿನಿಂದ ಪರಿಸ್ಥಿತಿ ತಂದೊಡ್ಡಿದ್ದ ಪಜೀತಿಯಲ್ಲಿ ಬಂಧಿಯಾಗಿದ್ದ ಜನ ಇದೀಗ ಪ್ರವಾಸಿ ತಾಣಗಳತ್ತ ಮನಸ್ಸು ಕೇಂದ್ರೀಕರಿಸಿದ್ದಾರೆ. ಅದರಲ್ಲೂ ಬೆಂಗಳೂರು ಸುತ್ತಮುತ್ತಲ ಜನರು ನಂದಿ ಬೆಟ್ಟದತ್ತ ಚಿತ್ತ ಹರಿಸಿದ್ದಾರೆ.
ಕಳೆದೆರಡು ವಾರಗಳಲ್ಲಿ ನಂದಿಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರದಂದು ನಂದಿಬೆಟ್ಟದಲ್ಲಿ ಜನಜಾತ್ರೆಯ ಸನ್ನಿವೇಶ ಸೃಷ್ಟಿಯಾಗಿದೆ.
ನಂದಿಬೆಟ್ಟದ ತಪ್ಪಲಲ್ಲಿ ಹಾಗೂ ವಾಹನ ನಿಲುಗಡೆ ಪ್ರದೇಶಗಳಲ್ಲಿ ಸಾವಿರಾರು ವಾಹನಗಳು ನಿಂತಿದ್ದ ದೃಶ್ಯ ಕಂಡುಬರುತ್ತಿತ್ತು. ಬಹುತೇಕ ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.
ಪರಿಸರವಾದಿಗಳ ಆತಂಕ:
ನಮ್ಮ ಬಹುತೇಕ ಪರಿಸರ ಪ್ರವಾಸೋದ್ಯಮದ ಸ್ಥಳ ಗಳು ಇತ್ತೀಚೆಗೆ ಹೀಗೆ ಆಗುತ್ತಿವೆ. ಇಷ್ಟು ಪ್ರಮಾಣದ ವಾಹನಗಳು ಅರಣ್ಯ ಪ್ರದೇಶದ, ಪ್ರಕೃತಿ ತಾಣಗಳಿಗೆ ಒಮ್ಮೆಲೇ ಲಗ್ಗೆ ಇಟ್ಟರೆ ಆ ಪರಿಸರವನ್ನೆ ಏಕೈಕ ಆಶ್ರಯ ತಾಣವಾಗಿ ನಂಬಿದ , ಜನರ ಗದ್ದಲವನ್ನು ಸಹಿಸದ ವನ್ಯಜೀವಿಗಳ ಪಾಡು ಏನಾಗಬೇಕು ಎಂಬ ಪ್ರಶ್ನೆಯೂ ಕಾಡತೊಡಗಿದೆ.
ಉಸಿರು, ನೀರು, ಅನ್ನ ಪಡೆಯಲು ಪರಿಸರ- ಅರಣ್ಯ ಅನಿವಾರ್ಯ. ಇಂತಹ ಅನಿವಾರ್ಯ ಕಾರ್ಯ ಮಾಡುವ ಏಕೈಕ ಮೂಲವಾದ ಪರಿಸರ/ಅರಣ್ಯವನ್ನು ನಮ್ಮ ಮನರಂಜನೆಗೆ ಅತಿಯಾಗಿ ತೆರೆದರೆ, ಒಟ್ಟಾರೆಯಾಗಿ ಅದು ನಮಗೆ ದೊಡ್ಡ ನಷ್ಟವಲ್ಲವೆ ಎಂದು ಪರಿಸರವಾದಿಗಳು ಹೇಳಿಕೊಂಡಿದ್ದಾರೆ.