ಬೆಂಗಳೂರು: ಜೆಡಿಎಸ್ ಬಗ್ಗೆ ಯಾವತ್ತಿಗೂ ಲಘುವಾಗಿ ಮಾತನಾಡಬೇಡಿ, 2018ರಲ್ಲಿ ನನ್ನ ಬಗ್ಗೆ ಲಘುವಾಗಿ ಮಾತನಾಡಿ ಬಳಿಕ ನನ್ನ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿ ಆಗಿ ಎಂದು ಬೇಡಿಕೊಂಡಿರುವುದು ನೆನಪಿರಲಿ. ಈ ಪಕ್ಷಕ್ಕೆ ಲಕ್ಷಾಂತರ ಬಡವರ ಶ್ರೀರಕ್ಷೆ ಇದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ವಾರ್ಡ್‌ನ ಬಯಲು ರಂಗಮಂದಿರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್‌ಗೆ ಮುನಿರತ್ನ ನಿಮ್ಮ ಗಾಡ್‌ಫಾದರ್ ಅಲ್ವಾ ಎಂದು ಕೇಳಿದ್ರಂತೆ, ಅವನ್ಯಾರು ನಮಗೆ ಗಾಡ್‌ಫಾದರ್ ಆಗೋದಕ್ಕೆ. ಯಾವತ್ತಿದ್ದರೂ ನಮ್ಮ ಗಾಡ್‌ಫಾದರ್ ಅಂದರೆ ಜನಗಳೆ ಎಂದು ಹೇಳಿದರು.
ಸಿದ್ದರಾಮಯ್ಯ ಸರಕಾರವನ್ನು ಪ್ರಧಾನಿ ಮೋದಿ ಬಂದು 10 ಪರ್ಸೆಂಟ್ ಸರಕಾರ ಎಂದರು, ಕಾಂಗ್ರೆಸ್‌ನವರು ಬಿಜೆಪಿ ಸರಕಾರವನ್ನು 10% ಗವರ್ನಮೆಂಟ್ ಎಂದರು. ಆದರೆ, ನಮ್ಮ ಸರಕಾರವನ್ನು ಯಾರೂ ಪರ್ಸೆಂಟೇಜ್ ಸರಕಾರ ಎಂದಿಲ್ಲ. ಬೆಂಗಳೂರು ಹಾಗೂ ಮೈಸೂರು ಹೊರವಲಯದ ಅಭಿವೃದ್ಧಿಗಾಗಿ 2006ರಲ್ಲಿ 25 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ಅದರ ಪ್ರತಿಫಲವೇ ಆರ್‌ಆರ್ ನಗರದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರು.
ಇವತ್ತು ಮೋದಿಯವರು ಭಾರತವನ್ನು ಬಾಂಗ್ಲಾದೇಶದ ಜೊತೆ ತಲಾ ಆದಯದಲ್ಲಿ ಪೈಪೋಟಿ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಕೊರೊನಾ ಕಾಲದಲ್ಲಿ ದೀಪ ಬೆಳಗಿಸಿ, ಚಪ್ಪಾಳೆ ತಟ್ಟಿ ಎಂದು ಮೋದಿ ಹೇಳಿದರು. ಆದರೆ, ಬಿಜೆಪಿಯವರು ತಮ್ಮ ಮನೆಗೆ ದೀಪ ಬೆಳಗಿಸಿಕೊಂಡರೆ ಹೊರತು ಜನರ ಜೀವನಕ್ಕೆ ದೀಪ ಬೆಳಗಿಸಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.