ಹಾವೇರಿ: ಉತ್ತಮ ಆರೋಗ್ಯ ಸೇವೆ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಹಾವೇರಿಯಲ್ಲಿ ‘ಆರೋಗ್ಯ ನಗರ’ವನ್ನು ನಿರ್ಮಿಸುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಹಾವೇರಿಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡದ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀಡಿಯೋ ಮೂಲಕ ಚಾಲನೆ ನೀಡಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ರಾಜ್ಯದಲ್ಲಿ ಇದೇ ವರ್ಷ 4 ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳ ನಿರ್ಮಾಣ ಪ್ರಕ್ರಿಯೆ ಶುರುವಾಗಿದೆ. ಹಾವೇರಿಯಲ್ಲಿ ಹೊಸ ಕಾಲೇಜು ಆವರಣದಲ್ಲಿ ಎಲ್ಲ ಬಗೆಯ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದ್ದು, ಹೆಚ್ಚು ಸಂಖ್ಯೆಯ ವೈದ್ಯರು ಆರೋಗ್ಯ ಕ್ಷೇತ್ರಕ್ಕೆ ಸಿಗಲಿದ್ದಾರೆ. ಇದರಿಂದ ಹಾವೇರಿಯಲ್ಲಿ ಆರೋಗ್ಯ ನಗರ ನಿರ್ಮಾಣವಾಗಲಿದೆ” ಎಂದರು.
“ಕಳೆದ 6 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ 157 ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಸಾಮಾಜಿಕ ಬದ್ಧತೆ ಇರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಕೆಲಸ ಮಾಡಿದೆ. ಹಿಂದುಳಿದ ವರ್ಗ, ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕನಸಾಗಿದ್ದು, ಈಗ ಅಂತಹವರಿಗೆ ಅನುಕೂಲವಾಗಿದೆ. ಹೊಸ ಕಾಲೇಜುಗಳಿಂದ ದೇಶದಲ್ಲಿ ಒಟ್ಟು 27 ಸಾವಿರ ವಿದ್ಯಾರ್ಥಿಗಳಿಗೆ ಲಾಭವಾಗಿದೆ. ಸ್ನಾತಕೋತ್ತರದ 17 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ” ಎಂದರು.
“ಕೋವಿಡ್ ಸೋಂಕು ಮಾರ್ಚ್ ನಲ್ಲಿ ಪತ್ತೆಯಾದಾಗ ಲಾಕ್ ಡೌನ್ ಮಾಡಲಾಯಿತು. ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಹೀಗಾಗಿ ಈಗ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.2.5 ರಿಂದ 3 ರಷ್ಟಿದೆ. ದೇಶದಲ್ಲಿ ಶೇ.1.4 ರಷ್ಟು ಹಾಗೂ ರಾಜ್ಯದಲ್ಲಿ 1.37 ಇದೆ. ಬೆಂಗಳೂರಿನಲ್ಲಿ ಶೇ.1.01 ರಷ್ಟಿದೆ. ಸಕ್ರಿಯ ಪ್ರಕರಣಗಳು ಕೂಡ ಬಹಳ ಕಡಿಮೆಯಾಗಿದೆ” ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಷಿ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೆಕಾರ ಉಪಸ್ಥಿತರಿದ್ದರು.