ರೈತರನ್ನು ರಕ್ಷಿಸುವ ಕಾಯಿದೆಯನ್ನೂ ರೂಪಿಸಿ; ಹೆಚ್ಡಿಕೆ ಸಲಹೆ

ಬೆಂಗಳೂರು: ಗೋಹತ್ಯೆ ನಿಷೇಧ ಜಾರಿ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ರೈತರನ್ನು ರಕ್ಷಿಸುವ ಕಾಯಿದೆಯನ್ನೂ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕಾಂಗ್ರೆಸ್‌-ಬಿಜೆಪಿಗೆ ಮತಬ್ಯಾಂಕ್‌ನದ್ದೇ ಆದ್ಯತೆ. ಆದರೆ, ಹಾಲು ಉತ್ಪಾದನೆಯಲ್ಲಿ ತೊಡಗಿರುವ 24 ಲಕ್ಷ ರೈತ ಕುಟುಂಬಗಳಿಗೆ ಕಾಯ್ದೆ ಬಗ್ಗೆ ಇರಬಹುದಾದ ಆತಂಕಗಳನ್ನು ಜೆಡಿಎಸ್‌ ವಿಮರ್ಶಿಸಲು ಬಯಸುತ್ತದೆ. ಈ ಹಿಂದೆಯೇ ಹೇಳಿದಂತೆ ಜೆಡಿಎಸ್‌ ಒಂದು ಪಕ್ಷವಾಗಿ ಮಾತ್ರವಲ್ಲ, ರೈತ ಸಂಘವಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.

ಸರ್ಕಾರ ಗೋಹತ್ಯೆ ನಿಷೇಧಿಸುವ ಕಾಯ್ದೆಯನ್ನು ರೂಪಿಸಿದೆ. ಆದರೆ, ಗೋಹತ್ಯೆ ನಿಷೇಧದ ಜೊತೆಗೆ ಗೋಮಾತೆಯನ್ನು ರಕ್ಷಿಸುವ, ಗೋಮಾತೆಯನ್ನೇ ನಂಬಿದ ರೈತರನ್ನು ರಕ್ಷಿಸುವ ಕಾನೂನಾಗಿಯೂ ಇವತ್ತಿನ ಈ ಕಾಯ್ದೆ ವರ್ತಿಸಬೇಕು ಎಂಬುದು ರೈತರ ಪ್ರತಿನಿಧಿಯಾದ ಜೆಡಿಎಸ್‌ನ ಒತ್ತಾಯ. ಈ ವಿಚಾರವಾಗಿ ಯಾರದ್ದೂ ತಕರಾರು ಇಲ್ಲ ಎಂದು ನಾವು ಭಾವಿಸುತ್ತೇವೆ ಎಂದವರು ಹೇಳಿದ್ದಾರೆ.

ರೈತ ತಾನು ಪೂಜಿಸುವ, ಪೋಷಿಸುವ, ಜೀವನಾಧಾರವನ್ನಾಗಿ ನಂಬಿರುವ ಗೋವು ಈ ಕಾಯ್ದೆ ಮೂಲಕ ಆತನಿಗೆ ಹೇಗೆ ಹೊರೆಯಾಗುತ್ತದೆ? ತಾನು ಸಾಕಿದ ಹಸು ಗಂಡು ಕರು ಹಾಕಿದಾಗ, ಹಸುವಿಗೆ ವಯಸ್ಸಾದಾಗ, ಕಾಯಿಲೆ ಬಿದ್ದಾಗ ಅದರ ನಿರ್ವಹಣೆ ಕಷ್ಟ. ಈಗಾಗಲೇ ಸಂಕಷ್ಟದಲ್ಲಿರುವ ರೈತನಿಗೆ ಈ ಹೊರೆ ಜೀವನ್ಮರಣದ ಪ್ರಶ್ನೆಯಾಗಲೂಬಹುದು ಎಂಬುದನ್ನು ಸರ್ಕಾರ ಮರೆತಂತಿದೆ ಎಂದು ಹೆಚ್ಡಿಕೆ ಬೊಟ್ಟುಮಾಡಿದ್ದಾರೆ.

 

 

 

Related posts