ಸಾಲದ ಹಣ ಸ್ವಾವಲಂಬಿ ಬದುಕಿಗೆ ಆಧಾರವಾಗಬೇಕು: ಬಿ.ಸಿ.ಪಾಟೀಲ್

ಹಾವೇರಿ,: ಸಾಲ ಪಡೆದ ಹಣದಲ್ಲಿ ಸಂಭ್ರಮ ಪಡದೇ ಸಾಲವನ್ನು ಆರ್ಥಿಕಾಭಿವೃದ್ಧಿಗೆ ಬುನಾದಿಯನ್ನಾಗಿಸಿ ಸ್ವಾವಲಂಬಿ ಬದುಕು ಕಂಡುಕೊಂಡಾಗ ಮಾತ್ರ ಸಾಲ ಪಡೆದಿದ್ದು ಹಾಗೂ ಸಾಲ ನೀಡಿದ ಉದ್ದೇಶವು ಈಡೇರಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಹಿರೇಕೆರೂರು ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಆತ್ಮ ನಿರ್ಭರ್ ನಿಧಿ” ಯಡಿಯಲ್ಲಿ 2019-20 ನೇ ಸಾಲಿನ ಶೇ.5 ರಂತೆ ವಿಶೇಷ ಚೇತನರಿಗೆ “ತ್ರಿಚಕ್ರ ವಾಹನ” ಹಾಗೂ ಸಹಾಯಧನ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಲಪತ್ರ ಮತ್ತು 2020-21 ನೇ ಸಾಲಿನ ಶೇ.24.10 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಾಗೂ 7.25 ರಷ್ಟು ಹಿಂದುಳಿದ ಸಮುದಾಯದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಸಚಿವ ಬಿ.ಸಿ.ಪಾಟೀಲ್ ವಿತರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಸ್ವಾವಲಂಬಿ ಬದುಕಿಗೆ ಆಧಾರವಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಸಹಾಯಧನ, ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದೆ.ಕಾರ್ಯಕ್ರಮದಲ್ಲಿಂದು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಗಿದೆ ಎಂದರು.

ಹೆಣ್ಣುಮಕ್ಕಳು ಹೊಲಿಗೆಯಂತ್ರವನ್ನು ಸಾಮೂಹಿಕವಾಗಿ ಪಡೆದಿದ್ದು, ಸಾಮೂಹಿಕವಾಗಿ ಒಗ್ಗಟ್ಟಾಗಿ ಸೇರಿ ಸಣ್ಣಸಣ್ಣ ಗಾರ್ಮೆಂಟ್ಸ್ ನಂತೆ ಮಾಡಿಕೊಂಡರೆ ಅನುಕೂಲವಾಗಲಿದೆ. ಹೊಲಿಗೆ ಉದ್ಯೋಗ ಕೈಹಿಡಿಯುವ ಉದ್ಯೋಗವಾಗಿದ್ದು, ಬಟ್ಟೆ ಹೊಲಿಗೆಗೆ ಸಾಕಷ್ಟು ಬೇಡಿಕೆಯಿದೆಎಂದರು.

Related posts