ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಚೇರಿ ಮುಂದೆ ಪಿಎಫ್ಐ ಪ್ರತಿಭಟನೆ; ಬಿಜೆಪಿ ಗರಂ

ಬೆಂಗಳೂರು: ವಿದೇಶಕ್ಕೆ ಪರಾರಿಯಾಗಲು ಕೇರಳದ ತಿರುವನಂತಪುರ ಅಂತರರಾಷ್ಟಿಯ ವಿಮಾನನಿಲ್ದಾಣಕ್ಕೆ ತೆರಳುತ್ತಿದ್ದ ಪಿಎಫ್ಐ ನಾಯಕ ರವೂಫ್ ಶರೀಫ್ ಬಂಧನವನ್ನು ಖಂಡಿಸಿ ಪಿಎಫ್ಐ ಸಂಘಟನೆಯು ಮಂಗಳೂರಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂಸದೀಯ ಕಚೇರಿ ಮುಂದೆ ನಡೆಸಿರುವ ಪ್ರತಿಭಟನೆ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಈ ಪ್ರತಿಭಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅನೇಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮೂಲಭೂತವಾದಿ ಮತ್ತು ಪ್ರತ್ಯೇಕತಾವಾದಿ ಪಿಎಫ್ಐ ಸಂಘಟನೆಯನ್ನು ಕೂಡಲೇ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶಿಕ್ಷಾರ್ಹರಾದ ಅಪರಾಧಿ ಹಿನ್ನೆಲೆಯ ಈ ವ್ಯಕ್ತಿಗಳು ಮತ್ತು ಸಂಘಟನೆಗಳು ದೇಶದ ಹಿತದೃಷ್ಟಿಯಿಂದ ಜಾರಿ ನಿರ್ದೇಶನಾಲಯ ಕೈಗೊಂಡಿರುವ ತನಿಖೆಯ ಕ್ರಮಗಳನ್ನು ಪ್ರತಿಭಟಿಸುವ ನೈತಿಕ ಮತ್ತು ಪ್ರಜಾಸತ್ತಾತ್ಮಕ ನೆಲೆಯನ್ನು ಹೊಂದಿರದೆ ದೆವ್ವಗಳು ಪವಿತ್ರ ಗ್ರಂಥಗಳನ್ನು ಉಲ್ಲೇಖಿಸಿದಂತ ಹಾಸ್ಯಾಸ್ಪದ ಘಟನೆ ಇದಾಗಿದೆ ಎಂದಿದ್ದಾರೆ. ಪ್ರತಿಭಟಿಸಿದ ಎಲ್ಲಾ ವ್ಯಕ್ತಿಗಳು ಶಿಕ್ಷಾರ್ಹರು ಮತ್ತು ಅವರೆಲ್ಲರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪಿಎಫ್ಐ ಸಂಘಟನೆಯ ತಥಾಕಥಿತ ಅಧ್ಯಕ್ಷ ರವೂಫ್ ಶರೀಫ್ ಮೂಲಕ ಒಮನ್ ಹಾಗೂ ಖತಾರ್ಗಳಿಂದ 2 ಕೋಟಿಗಿಂತ ಅಧಿಕ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದು, ಈ ಹಣವನ್ನು ದೇಶವಿರೋಧಿ ಕೃತ್ಯಗಳಿಗೆ ಬಳಸಲಾಗುತ್ತಿತ್ತು. ಇದನ್ನು ಗಮನಿಸಿಯೇ ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯ ವಿಧ್ವಂಸಕ ಕೃತ್ಯಗಳು, ಮಂಗಳೂರಿನಲ್ಲಿ ನಡೆದ ದೇಶವಿರೋಧಿ ಗಲಭೆ, ಈ ಹಿಂದೆ ಸಿದ್ದರಾಮಯ್ಯ ಅವರ ಸರಕಾರ ಇರುವ ಸಂದರ್ಭದಲ್ಲಿ ಸಂಘ ಪರಿವಾರದ 25 ಹಿಂದೂಪರ ಕಾರ್ಯಕರ್ತರ ಹತ್ಯೆ, ಕೊರೊನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರ ಮೇಲೆ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲ್ಲೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ನಡೆಸಿದ ಪ್ರತಿಭಟನೆಗಳಲ್ಲೂ ಪಿಎಫ್ಐ ಸಂಘಟನೆಯ ನೇರ ಕೈವಾಡವಿದ್ದು ಅಕ್ರಮವಾಗಿ ಗಲಭೆ ಪ್ರಚೋದಿಸಲು ರೂ. 120 ಕೋಟಿ ಹಣವನ್ನು ಖರ್ಚು ಮಾಡಿರುವುದಾಗಿ ತಿಳಿದುಬಂದಿರುತ್ತದೆ. ಈ ರಾಷ್ಟವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಮತ್ತು ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ಪ್ರತ್ಯೇಕತಾವಾದಿ ಸಂಘಟನೆಯಾದ ಪಿಎಫ್ಐಯನ್ನು ಕೂಡಲೇ ನಿಷೇಧಿಸುವುದು ದೇಶದ ಹಿತದೃಷ್ಟಿಯಿಂದ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Related posts