ಬೆಂಗಳೂರು: ಕೊಚ್ಚಿ – ಮಂಗಳೂರು ನಡುವಿನ ನೈಸರ್ಗಿಕ ಅನಿಲ ಪೈಪ್ಲೈನನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಸುಮಾರು 3,000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 450 ಕಿಮೀ ಉದ್ದದ ಪೈಪ್ಲೈನ್ ಲೋಕಾರ್ಪಣೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು, ಕೇರಳದ ಕಣ್ಣೂರು, ಕಾಸರಗೋಡು ಸೇರಿದಂತೆ ಹಲವು ಜಿಲ್ಲೆಗಳ ಅಭಿವೃದ್ಧಿಗೆ ಮುನ್ನುಡಿ ಬರೆದಂತಾಗಿದೆ.
ಈ ಯೋಜನೆಯ ನಿರ್ಮಾಣ ಹಂತದಲ್ಲಿ 12 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ. ಭವಿಷ್ಯದಲ್ಲಿ ಭಾರಿ ಪ್ರಮಾಣದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಇದರಿಂದ ಕರಾವಳಿ ಜಿಲ್ಲೆಗಳು ಮತ್ತು ಕೇರಳದ ಹಲವು ಜಿಲ್ಲೆಗಳ ತ್ವರಿತ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಭಾರತೀಯ ಜನತಾ ಪಕ್ಷ ಹೇಳಿದೆ.
ಇದು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ನಿರ್ಣಯವಾಗಿದ್ದು, ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಮತ್ತು ಅಪಘಾತವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ. ಅಡುಗೆ ಮನೆಗಳು ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಸ್ವಚ್ಛ ಇಂಧನ ಲಭಿಸಲಿದ್ದು, ಈ ಯೋಜನೆ ಜಾರಿಗಾಗಿ ಪ್ರಧಾನಿಯವರು, ಕೇಂದ್ರ ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರನ್ನು ರಾಜ್ಯ ಬಿಜೆಪಿ ಪರವಾಗಿ ಅಭಿನಂದಿಸುವುದಾಗಿ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.