ರಾಮನಗರ: ರಾಜ್ಯದ ಸರಕಾರಿ ಪದವಿ, ಎಂಜನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ನೀಡುವ ಮಹತ್ವದ ನಿರ್ಧಾರವನ್ನು ಸರಕಾರ ಕೈಗೊಂಡಿದೆ.
ಡಿಜಿಟಲ್ ಯುಗದಲ್ಲಿ ಮಕ್ಕಳ ಸಮಗ್ರ ಕಲಿಕೆ ಹಾಗೂ ಖಾಸಗಿ-ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಅಂತರವನ್ನು ಅಳಸಿ ಹಾಕಲು ಉಚಿತ ಟ್ಯಾಬ್ಗಳನ್ನು ವಿತರಿಸಲಾಗುತ್ತಿದೆ. ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳು, 14 ಸರಕಾರಿ ಎಂಜನಿಯರಿಂಗ್ ಕಾಲೇಜುಗಳಲ್ಲಿನ ಪ್ರಥಮ, ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳು ಹಾಗೂ 87 ಸರಕಾರಿ ಪಾಲಿಟೆಕ್ನಿಕ್ಗಳಲ್ಲಿ ಓದುತ್ತಿರುವ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಈ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಸರಕಾರ 155.4 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಡಿಸಿಎಂ ಅಶ್ವಥನಾರಾಯಣ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಕುಟುಂಬಗಳ ಪ್ರತಿಭಾವಂತ ನೂರು ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು,
ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರು. ಇಂಥ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್ಗಳನ್ನು ನೀಡುವ ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನಡುವಿನ ಡಿಜಿಟಲ್ ಅಂತರವನ್ನು ಸಂಪೂರ್ಣವಾಗಿ ಅಳಿಸಿಹಾಕಿದಂತಾಗಿದೆ ಎಂದರು.
155.4 ಕೋಟಿ ರೂ. ವೆಚ್ಚ:
ಈ ಟ್ಯಾಬ್ಲೆಟ್ಗಳ ಖರೀದಿಗೆ ಒಟ್ಟು 155.4 ಕೋಟಿ ವೆಚ್ಚವಾಗುತ್ತಿದ್ದು, ಪ್ರತಿ ಒಂದು ಟ್ಯಾಬ್ಲೆಟ್ ಅನ್ನು 10 ಸಾವಿರ ರೂ. ಬೆಲೆಯಂತೆ ಖರೀದಿ ಮಾಡಲಾಗುತ್ತಿದೆ. ಸರಕಾರಿ ಪದವಿ ಕಾಲೇಜುಗಳಲ್ಲಿ ಪ್ರಥಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 11,500 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ಗಳನ್ನು ಕೊಡಲಾಗುತ್ತದೆ. ಇವಿಷ್ಟೂ ಟ್ಯಾಬ್ಲೆಟ್ಗಳ ಖರೀದಿಗೆ 115 ಕೋಟಿ ರೂ. ವೆಚ್ಚವಾಗುತ್ತಿದೆ. ಹಾಗೆಯೇ, ಪಾಲಿಟೆಕ್ನಿಕ್ಗಳಲ್ಲಿ ಓದುತ್ತಿರುವ ಪ್ರಥಮ ಮತ್ತು ದ್ವಿತೀಯ ವರ್ಷದ 28,908 ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಟ್ಯಾಬ್ಲೆಟ್ಗಳಿಗೆ 28.91 ಕೋಟಿ ರೂ. ಹಾಗೂ ಎಂಜಿನಿಯರಿಗ್ ಕಾಲೇಜುಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 11,488 ವಿದ್ಯಾರ್ಥಿಗಳ ಟ್ಯಾಬ್ಲೆಟ್ಗಳಿಗೆ 11.49 ಕೋಟಿ ರೂ. ಸೇರಿ ಒಟ್ಟು 155.4 ಕೋಟಿ ರೂ. ವೆಚ್ಚವಾಗಲಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.