ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ರಾಜ್ಯಾದ್ಯಂತ ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನ ಪರಿಶೀಲಿಸಿದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ರಾಜ್ಯದಲ್ಲಿ ಮೊದಲ ದಿನವೇ 62% ಮಂದಿಗೆ ಲಸಿಕೆ ನೀಡಿರುವುದು ಆಶಾದಾಯಕವಾಗಿದೆ. ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದರು.
ಡಾ.ಸುದರ್ಶನ್ ಬಲ್ಲಾಳ್ ಅವರು ಲಸಿಕೆ ಪಡೆದಿದ್ದು, ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹೀಗಾಗಿ ಜನರು ಲಸಿಕೆಯ ಮೇಲೆ ವಿಶ್ವಾಸವಿಡಬೇಕು. ಲಸಿಕೆ ಪಡೆದರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎರಡನೇ ಡೋಸ್ ಪಡೆದ 10 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಬರುತ್ತದೆ. ಅಲ್ಲಿಯವರೆಗೂ ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಸಚಿವರು ಹೇಳಿದರು.

ಮಣಿಪಾಲ್ ಆಸ್ಪತ್ರೆಯಲ್ಲಿ 4,200 ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಮಾಡುವಂತೆ ಬೂತ್ ಗಳನ್ನು ರೂಪಿಸಿ ವ್ಯವಸ್ಥಿತವಾಗಿ ಲಸಿಕೆ ನೀಡಲಾಗುತ್ತಿದೆ. ಶೇ.70 ರಷ್ಟು ಮಂದಿಗೆ ಲಸಿಕೆ ನೀಡಲು ಸಾಧ್ಯವಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಕಾರಣಾಂತರಗಳಿಂದ ಲಸಿಕೆ ಪಡೆಯದವರು ಮತ್ತೆ ಲಸಿಕೆ ಪಡೆಯಲು ಅವಕಾಶವಿದೆ ಎಂದರು.

ಬಿಜೆಪಿ ವರಿಷ್ಠರು ನಮ್ಮ ಸರ್ಕಾರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಮುಂದಿನ ಐದು ವರ್ಷವೂ ನಮ್ಮ ಸರ್ಕಾರ ಇರಲಿದೆ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷಗಳು ವಿರೋಧವಾಗಿ ಹೇಳಿದರೆ ಅವರಿಗೆ ಮಾರ್ಕೆಟ್ ದೊರೆಯುತ್ತದೆ. ಯಾರು ಏನು ಹೇಳಿದರೂ ಅದನ್ನು ಸಾಬೀತುಮಾಡಬೇಕು ಎಂದರು.

Related posts