ಉದ್ಯೋಗದಾತನ ಬಗ್ಗೆ ಗುಣಗಾನ ಕೇಳಿ ಮುಖ್ಯಮಂತ್ರಿ ಪುತ್ರ ಸಂಸದ ರಾಘವೇಂದ್ರ ಮೂಡ್ನವಿಸ್ಮಿತ.. ಅಭಿಮಾನ ಸೂಚಿಸಿ ಸನ್ಮಾನಿಸಿದ ಕ್ಷಣವೂ ಅನನ್ಯ ಹಾಗೂ ಅಪರೂಪದ ಪ್ರಸಂಗ
ಉಡುಪಿ: ಸಾಂಪ್ರದಾಯಿಕ ಮತ್ಸ್ಯವೋದ್ಯಮಕ್ಕೆ ಇದೀಗ ಆಧುನಿಕತೆಯ ಸ್ಪರ್ಷ ಸಿಕ್ಕಿದೆ. ಮತ್ಸ್ಯಶ್ರೀಮಂತಿಕೆಯ ತವರಾಗಿರುವ ರಾಜ್ಯದ ಕರಾವಳಿ ಇನ್ನು ಮುಂದೆ ‘ಫಿಷ್ ವೇಪರ್ಸ್’ ಉತ್ಪನ್ನಗಳಿಂದಲೂ ಹೆಸರುವಾಸಿಯಾಗಲಿದೆ. ಅರಬ್ಬೀ ಸಮುದ್ರದಿಂದ ಹೇರಳವಾಗಿ ಸಿಗುತ್ತಿರುವ ಮತ್ಸ್ಯ ಸಂಪತ್ತನ್ನು ಆಹಾರವಾಗಿ ಬಳಸುತ್ತಿದ್ದ ಜನರಿಗೆ ಇನ್ನು ಮುಂದೆ ಅದರ ಮೌಲ್ಯವರ್ಧಿತ ಖಾದ್ಯಗಳೂ ಸಿಗಲಿವೆ.
ಈ ಫಿಷ್ ವೇಪರ್ಸ್ ಹಾಗೂ ಚಿಪ್ಸ್ ಸಹಿತ ಮೀನಿನಿಂದ ವಿವಿಧ ಖಾದ್ಯಗಳನ್ನು ತಯಾರಿಸುವ ಘಟಕ ಸ್ಥಾಪನೆಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಯಿತು. ದೇಶದ ಪ್ರತಿಷ್ಠಿತ ಆಹಾರೋತ್ಪನ್ನ ಸಂಸ್ಥೆ ChefTalkನ ಮುಖ್ಯಸ್ಥ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದಲ್ಲಿ, ‘ಮತ್ಸ್ಯಬಂಧನ’ ಎಂಬ ಹೆಸರಲ್ಲಿ ಕರಾವಳಿ ಜನರ ಮಹತ್ವಾಕಾಂಕ್ಷೆಯ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪನ್ನ ಘಟಕ ತಲೆ ಎತ್ತಲಿದ್ದು ಮಂಗಳವಾರ ಉಡುಪಿ ಜಿಲ್ಲೆ ಬೈಂದೂರು ಸಮೀಪದ ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ದೇಶದಲ್ಲೇ ಮೊದಲೆಂಬಂತೆ ಈ ಉದ್ದಿಮೆ ಕಾರ್ಯರೂಪಕ್ಕೆ ಬರಲಿರುವ ಈ ಉದ್ದಿಮೆಯ ಪ್ರವರ್ತಕ ಗೋವಿಂದ ಬಾಬು ಪೂಜಾರಿಯವರು ಈ ಸಮಾರಂಭದಲ್ಲಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಈಗಾಗಲೇ ChefTalk ಸಂಸ್ಥೆಯ ಮೂಲಕ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಹೈದರಾಬಾದ್ ಸಹಿತ ಅನೇಕ ರಾಜ್ಯಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿರುವ ಗೋವಿಂದ ಬಾಬು ಪೂಜಾರಿಯವರು ಇದೀಗ ‘ಮತ್ಸ್ಯ ಬಂಧನ’ ಮೂಲಕವೂ ಅಷ್ಟೇ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಿ ಯುವಜನರ ಪಾಲಿಗೆ ಆಶಾಕಿರಣವಾಗಿದ್ದಾರೆ.
ಉದ್ಯೋಗದಾತನ ಕಥೆ ಕೇಳಿ ಅತಿಥಿಗಳು ಮೂಕವಿಸ್ಮಿತ
ಮಂಗಳವಾರ ನೆರವೇರಿದ್ದು ‘ಮತ್ಸ್ಯ ಬಂಧನ’ ಸಂಸ್ಥೆಯ ಶಿಲಾನ್ಯಾಸ ಕೈಂಕರ್ಯ. ಆದರೆ ಅದು ಸಾಕ್ಷಿಯಾದದ್ದು ಉದ್ಯೋಗದಾತ ಗೋವಿಂದ ಬಾಬು ಪೂಜಾರಿಯ ಗುಣಗಾನಕ್ಕೆ. ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ.ರಾಘವೇಂದ್ರ, ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಸಹಿತ ನೂರಾರು ಗಣ್ಯರ ಸಮ್ಮುಖದಲ್ಲಿ ಅನೇಕರು ಭಾಷಣ ಮಾಡುತ್ತಾ ಗೋವಿಂದ ಬಾಬು ಪೂಜಾರಿಯವರ ಬದುಕಿನ ದಾರಿ ಬಗ್ಗೆ ಬೆಳಕು ಚೆಲ್ಲುತ್ತಲಿದ್ದರು. ಯುವಜನರಿಗಾಗಿ ಮಾಡಿದ ಸೇವೆ, ಮಹಿಳೆಯರು ರೈತರು ಸ್ವಾವಲಂಬಿಯಾಗಲು ಕಟ್ಟಿದ ಸಹಕಾರ ಸಂಸ್ಥೆ, ಸೂರಿಲ್ಲದವರಿಗಾಗಿ ಕಟ್ಟಿಸಿದ ಮನೆಗಳು, ನೀರಿಲ್ಲದವರಿಗಾಗಿ ಕಲ್ಪಿಸಿದ ಜೀವಜಲ ವ್ಯವಸ್ಥೆ.. ಹೀಗೆ ಇವರ ಹತ್ತಾರು ಕೆಲಸಗಳನ್ನು ಉದಾಹರಿಸಿ ನಾಡಿನ ಅಭ್ಯುದಯದ ಮಾತುಗಳನ್ನಾಡುತ್ತಿದ್ದರು. ಈ ಮಾರುದ್ದದ ಸಾಧನೆಗಳ ಪಟ್ಟಿಯ ಬಗ್ಗೆ ಕೇಳುತ್ತಲೇ ವೇದಿಕೆಯ್ಲ್ಲಿದ್ದ ತಿಥಿಗಳು ಮೂಕವಿಸ್ಮಿತರಾಗಿದ್ದರು. ಗೋವಿಂದ ಬಾಬು ಪೂಜಾರಿಯವರ ಪರಿಶ್ರಮವನ್ನು ಕೇಳುತ್ತಲೇ ಅಭಿಮಾನ ವ್ಯಕ್ತಪಡಿಸಿದ ಸಂಸದ ಬಿ.ಯೈ.ರಾಘವೇಂದ್ರ, ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಸಾಕ್ಷೀಕರಿಸುವ ರೀತಿಯಲ್ಲಿ ಗೋವಿಂದ ಬಾಬು ಪೂಜಾರಿ ದಂಪತಿಯನ್ನು ಸನ್ಮಾನಿಸಿ, ಅಭಿನಂದಿಸಿ ಅಚ್ಚರಿಯ ಸನ್ನಿವೇಶ ಸೃಷ್ಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಾಘವೇಂದ್ತ, ಮತ್ಸ್ಯ ಬಂಧನ ಸಂಸ್ಥೆ ಕಟ್ಟಿ ಮತ್ಸ್ಯೋತ್ಪನ್ನ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಇದರಿಂದ ಮೀನುಗಾರಿಕಾ ಕ್ಷೇತ್ರಕ್ಕೂ ವರದಾನವಾಗಲಿದೆ ಎಂದರು. ಗೋವಿಂದ ಬಾಬು ಪೂಜಾರಿಯವರು ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ, ಶಿಕ್ಷಣ ಕೊಡಿಸುತ್ತಿದ್ದಾರೆ, ಹಳ್ಳಿಗಳಿಗೆ ಕುಡಿಯುವ ನೀರು ಕೊಟ್ಟಿದ್ದಾರೆ. ಇವರ ಈ ಹೊಸ ಕಾರ್ಯ ಕೂಡಾ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಮತ್ಸ್ಯ ಸಂಪತ್ತನ್ನು ಬಳಸಿಕೊಳ್ಳುವ ಮೂಲಕ ಮೀನುಗಾರಿಕೆಗೆ ಅನುಕೂಲವಾಗುವ ಉದ್ಯಮ ಕರಾವಳಿ ಭಾಗಕ್ಕೆ ಅಗತ್ಯವಿತ್ತು. ಇದೀಗ ಈ ಅಗತ್ಯವನ್ನು ಗೋವಿಂದ ಬಾಬು ಪೂಜಾರಿ ಸಾಕಾರಗೊಳಿಸಿ ಸಾವಿರಾರು ಮಂದಿಗೆ ಉದ್ಯೋಗ ಕೊಡಿಸಲು ಮುಂದಾಗಿರುವುದು ಉತ್ತಮ ಹೆಜ್ಜೆಯಾಗಿದೆ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕೊರೋನಾ ಕಾರಣದಿಂದಾಗಿ ಅನೇಕರು ಉದ್ಯೋಗವಂಚಿತರಾಗಿದ್ದಾರೆ. ಇಂತಹಾ ಸಂದರ್ಭದಲ್ಲಿ ಉದ್ಯಮ ಸ್ಥಾಪಿಸಿ ಅಸಹಾಯಕರಿಗೆ ನೆರವಾಗುವ ಪ್ರಯತ್ನಕ್ಕೆ ‘ಮತ್ಸ್ಯ ಬಂಧನ’ದ ವ್ಯವಸ್ಥಾಪಕ ನಿರ್ದೆಶಕ ಗೋವಿಂದ ಬಾಬು ಪೂಜಾರಿ ಮುಂದಾಗಿದ್ದಾರೆ ಎಂದರು. ಈ ಉದ್ದಿಮೆ ಪರಿಕಲ್ಪನೆಯ ಉತ್ಪನ್ನಗಳು, ಖಾದ್ಯಗಳು ಇಂದಿನ ವೇಗದ ಯುಗಕ್ಕೆ ಅನುಕೂಲವಾಗಲಿದೆ ಎಂದು ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರಾದ ಉಮಾನಾಥ ಕೋಟ್ಯಾನ್, ಗೋಪಾಲ ಪೂಜಾರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ನಿಗಮದ ಎಂಡಿ ಎಂ.ಎಲ್.ದೊಡ್ಮನಿ ಸಹಿತ ಹಲವಾರು ಗಣ್ಯರು ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಪರಿಶ್ರಮ ಬಗ್ಗೆ ಕೊಂಡಾಡಿದರು.