ಹಳ್ಳಿ ಜನರ ಸಮಸ್ಯೆ ಅರಿಯಲು ಗ್ರಾಮವಾಸ್ತವ್ಯ ಸಹಕಾರಿ: ಡಾ.ವೀರೇಂದ್ರ ಹೆಗ್ಗಡೆ

ಉಜಿರೆ: ಹಳ್ಳಿ ಜನರ ಸಮಸ್ಯೆಗಳನ್ನು ಅರಿಯಲು ಗ್ರಾಮವಾಸ್ತವ್ಯ ಸಹಕಾರಿ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಈ ತಿಂಗಳ 31ರಂದು ಕಡಬದ ಕೊಂಬಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದಲ್ಲಿ ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ ಬಿ.ಎನ್, ಸದಸ್ಯರಾದ ಭಾಸ್ಕರ ರೈ ಕಟ್ಟ, ಅತಿಥೇಯ ಕಡಬದ ಅಧ್ಯಕ್ಷ ನಾಗರಾಜ ಎನ್.ಕೆ, ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ, ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ, ಬೆಳ್ತಂಗಡಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಾರಪ್ಪ ಪೂಜಾರಿ ಬೆಳಾಲು, ಸದಸ್ಯರಾದ ಆರ್.ಎನ್ ಪೂವಣಿ, ಧನಕೀರ್ತಿ ಆರಿಗ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪತ್ರಕರ್ತರ ನಡೆಗೆ ಶ್ಲಾಘನೆ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಾಮಾನ್ಯವಾಗಿ ಗ್ರಾಮದ ಜನರ ಸಮಸ್ಯೆಗಳನ್ನು ವರದಿ ಮಾಡಿ ಅದರ ಪರಿಹಾರಕ್ಕೆ ಪ್ರಯತ್ನಿಸುತ್ತಾರೆ. ಇದೀಗ ಪತ್ರಕರ್ತರೇ ಗ್ರಾಮಕ್ಕೆ ತೆರಳಿ ಜನರ ಬಳಿಗೆ ಹೋಗುವುದರಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಮೂಕವೇದನೆಯನ್ನು ಹೇಳಿಕೊಳ್ಳಲು ಜನರಿಗೆ ಅವಕಾಶ ಸಿಕ್ಕಿದೆ. ಜೊತೆಗೆ ಪತ್ರಕರ್ತರಿಗೂ ಜನರ ಸಮಸ್ಯೆಯನ್ನು ತಿಳಿದುಕೊಳ್ಳಲು ಒಂದು ಅವಕಾಶ. ಈ ರೀತಿಯ ಪತ್ರಕರ್ತರ ಗ್ರಾಮವಾಸ್ತವ್ಯ ಗ್ರಾಮಾಭಿವೃದ್ಧಿಗೆ ಪೂರಕ ಎಂದರು. ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸುವ ಹೆಗ್ಗಡೆಯವರು ಶುಭ ಹಾರೈಸಿದರು.

Related posts