ಬೆಂಗಳೂರು: ದಿವಂಗತ ಮಾಜಿ ಸಿಎಂ ಬಂಗಾರಪ್ಪ ಪುತ್ರ, ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇದೀಗ ನಟ, ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಪತ್ನಿ ಗೀತಾ ಕೂಡಾ ಕೈ ಹಿಡಿಯಲು ಮುಂದಾಗಿದ್ದಾರೆ. ಈ ಸಂಬಂಧ ನಟ ಶಿವರಾಜ್ ಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಇಂದಿನ ಭೇಟಿಗೆ ಭಾರೀ ಮಹತ್ವ ಬಂದಿದೆ.
ಈ ಕುರಿತಂತೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಸೇರುವ ಬಗ್ಗೆ ಕಾದು ನೋಡಿ ಎಂದು ಹೇಳಿ ಕುತೂಹಲವನ್ನು ಕೆರಳುವಂತೆ ಮಾಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ನಟ ಶಿವರಾಜ್ ಕುಮಾರ್ ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಶಿವರಾಜ್ ಕುಮಾರ್ ಅವರು ನಮ್ಮ ಆತ್ಮೀಯರು. ಅವರ ಕುಟುಂಬ ಇಡೀ ದೇಶ ಹಾಗೂ ರಾಜ್ಯದ ಆಸ್ತಿ. ಆ ಕುಟುಂಬದ ಮೇಲೆ ನಮಗೆ ಅಪಾರ ಗೌರವವಿದೆ. ನಮಗೂ ಅವರ ಜತೆ ವೈಯಕ್ತಿಕ ಸಂಬಂಧಗಳಿವೆ. ನಾನು ಆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಮಧು ಬಂಗಾರಪ್ಪ ಅವರಿಗೆ ಆ ಬಗ್ಗೆ ಮಾತನಾಡುವ ಹಕ್ಕಿದೆ. ಅವರು ಮಾತನಾಡಿದ್ದಾರೆ. ಸಂದರ್ಭ ಬಂದಾಗ ಗೀತಾ ಶಿವರಾಜ್ ಕುಮಾರ್ ಅವರೇ ಮಾತನಾಡುತ್ತಾರೆ’ ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಉತ್ತರಿಸಿದ ಅವರು, ‘ಸದನದಲ್ಲಿ ನಮ್ಮ ಶಾಸಕಾಂಗ ಪಕ್ಷದ ನಾಯಕರು ಬಜೆಟ್ ಬಗ್ಗೆ ಮಾತನಾಡಲಿದ್ದಾರೆ. ನಂತರ ಸಂಜೆ ನಾವು ಹಿರಿಯ ನಾಯಕರ ಜತೆ ಚರ್ಚೆ ಮಾಡುತ್ತೇವೆ. ಆನಂತರ ಸಿಡಿ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.