ರಾಜ್ಯದಲ್ಲಿ ಭರ್ಜರಿ ಸರ್ಜರಿಗೆ ನಡೆದಿದೆಯೇ ತಯಾರಿ.‌.? ಬಿಜೆಪಿ ಹೈಮಾಂಡ್ ನಡೆ ಬಗ್ಗೆ ಹೆಚ್ಚಿದ ಕುತೂಹಲ

ದೆಹಲಿ: ಉತ್ತರ ಭಾರತದ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಮೂಲಕ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿರುವ ಹೈಕಮಾಂಡ್ ಇದೀಗ ಕರ್ನಾಟಕದಲ್ಲೂ ನಾಯಕರಿಗಾಗಿ ಹುಡುಕಾಟ ಆರಂಭಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪರಿಪೂರ್ಣ ಬಹುಮತ ಗಳಿಸುವಷ್ಟು ಮಟ್ಟಕ್ಕೆ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಂತಹಾ ನಾಯಕರು ಯಾರಿದ್ದಾರೆ ಎಂಬ ಬಗ್ಗೆ ರಾಷ್ಟ್ರೀಯ ವರಿಷ್ಠರು ಅಳೆದು ತೂಗುತ್ತಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಲಿಂಗಾಯತ ಸಮುದಾಯ, ಒಕ್ಕಲಿಗರು, ಕುರುಬರು ಹಾಗೂ ಪರಿಶಿಷ್ಠ ಸಮುದಾಯಗಳ ಪ್ರಭಾವ ಬೇಕಿರುವುದರಿಂದ ಎಲ್ಲಾ ವರ್ಗಗಳನ್ನು ಸಮಾಧಾನಪಡಿಸುವ ಅನಿವಾರ್ಯತೆ ಬಿಜೆಪಿಗಿದೆ. ಹಾಗಾಗಿ ಹಲವರ ಹೆಸರುಗಳು ಹೈಕಮಾಂಡ್‌ನ ಪಟ್ಟಿಯಲ್ಲಿದೆ.

ಲಕ್ಷ್ಮಣ್ ಸವದಿ, ಜಗದೀಶ ಶೆಟ್ಟರ್, ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಹೈಕಮಾಂಡ್‌ಗೆ ಸಾಕಷ್ಟು ಒಲವು ಇದೆಯಾದರೂ, ಅಧಿಕಾರದ ವಿಚಾರ ಗಮನಿಸಿದಾಗ ಈ ವರೆಗೂ ಮುಖ್ಯಮಂತ್ತಿ, ಉಪಮುಖ್ಯಮಂತ್ರಿಯಂತಹಾ ಉನ್ನತ ಹುದ್ದೆಗಳನ್ನು ಲಿಂಗಾಯತ ನಾಯಕರೇ ಆಲಂಕರಿಸಿದ್ದಾರೆ. ಹಾಗಾಗಿ ಈ ಬಾರಿ ಬಿಎಸ್‌ವೈ ಉತ್ತರಾಧಿಕಾರಿಯಾಗಿ ಒಕ್ಕಲಿಗ ಅಥವಾ ಕುರುಬ ಸಮುದಾಯದ ನಾಯಕರನ್ನು ಆಯ್ಕೆ ಮಾಡಿದರೆ ಹೇಗೆ ಎಂಬ ಅಭಿಪ್ರಾಯ ಸಂಘದ ನಾಯಕರದ್ದು. ಹಾಗಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ‌ಟಿ.ರವಿ, ಡಿಸಿಎಂ ಅಶ್ವತ್ಥನಾರಾಯಣ, ಈಶ್ವರಪ್ಪ ಹೆಸರಿನತ್ತ ಗಮನಹರಿದಿದೆ.

ಇನ್ನೊಂದೆಡೆ ಗೋವಿಂದ ಕಾರಜೋಳ ಹೆಸರೂ ಪ್ರಸ್ತಾಪದಲ್ಲಿದೆ. ಒಂದು ವೇಳೆ ಈ ಹೆಸರುಗಳ ಬಗ್ಗೆ ತಕರಾರು ಉಂಟಾದಲ್ಲಿ ಸಂಘದ ಪ್ರಭಾವದಿಂದ ರಾಜಕಾರಣದಲ್ಲಿ ಬೇರೂರಿರುವ ಪ್ರಲ್ಹಾದ್ ಜೋಷಿಯವರಿಗೆ ಸಾರಥ್ಯ ಸಿಗಬೇಕಾಗುತ್ತದೆ ಎಂಬುದು ಕೇಸರಿ ಗರಡಿಯಲ್ಲಿ ಕೇಳಿ ಬರುತ್ತಿರುವ ಮಾತುಗಳು.

ಈ ನಡುವೆ, ಪಂಚ ರಾಜ್ಯಗಳ ಚುನಾವಣೆ ನಂತರ ಬಿಜೆಪಿಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಬಿಜೆಪಿಯೊಳಗಿನ ರಾಜಕೀಯ ಪಂಡಿತರೇ ವಿಶ್ಲೇಷಣೆ ಮಾಡುತ್ತಿದ್ದಾರೆ.

Related posts