‘ಕುಕ್ಕರ್ ಬಾಂಬ್’ ವಿಚಾರದಲ್ಲಿ ಬಿಜೆಪಿಯಿಂದ ನನಗೆ ಪುಕ್ಕಟೆ ಪ್ರಚಾರ’: ಡಿಕೆಶಿ ಎದಿರೇಟು

ಹುಬ್ಬಳ್ಳಿ: ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ಬಿಜೆಪಿಯವರು ತಮಗೆ ಪಕ್ಕಟೆ ಪ್ರಚಾರ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ಡಿಕೆಶಿ ಅವರು, ಕುಕ್ಕರ್ ಬ್ಲಾಸ್ಟ್ ವಿಚಾರವಾಗಿ ತಮ್ಮ ಹೇಳಿಕೆಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ  ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. ‘ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ ಎಂದರು.

ಭಯೋತ್ಪಾದನೆಯಿಂದ ನಾವು ನಮ್ಮ ನಾಯಕರುಗಳನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಪ್ರತಿ ಹಂತದಲ್ಲೂ ಭಯೋತ್ಪಾದನೆಯನ್ನು ವಿರೋಧ ಮಾಡಿಕೊಂಡು, ದಮನ ಮಾಡಿಕೊಂಡು ಬಂದಿದೆ. ನಾವು ಭಯೋತ್ಪಾದನಾ ಕೃತ್ಯ ಖಂಡಿಸುತ್ತೇವೆ ಎಂದ ಅವರು, ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಮುಖ ಆರೋಪಿಗೆ ಪ್ರಜ್ಞೆ ಬಂದಿಲ್ಲ. ಹೀಗಾಗಿ ಅವನ ವಿಚಾರಣೆ ಮಾಡಿಲ್ಲ. ಅವನ ತನಿಖೆ ನಂತರ ಮಾಹಿತಿ ಪಡೆಯಬೇಕು, ಆನಂತರ ಮಾಧ್ಯಮಗಳು ಈ ವಿಚಾರವಾಗಿ ಮಾಹಿತಿ ಪ್ರಕಟಿಸಬೇಕು ಎಂದು ಕೇಳಿಕೊಂಡಿದ್ದಾರೆ. ಪೊಲೀಸ್ ಆಯುಕ್ತರು ಹೇಳುವ ಮುನ್ನವೇ ಡಿಜಿ ಅವರು ಹೇಳಿಕೆ ನೀಡಿದ್ದಾರೆ. ಆತ ಭಯೋತ್ಪಾದಕನೆ ಇರಬಹುದು. ತನಿಖೆ ಮಾಡಿದ ನಂತರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮತದಾರರ ಮಾಹಿತಿ ಕಳವು, ಬಿಜೆಪಿಗೆ ಮತ ಹಾಕದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮತವನ್ನೇ ತೆಗೆದು ಹಾಕಲಾಗಿದೆ. 8500 ಜನಕ್ಕೆ ಅಕ್ರಮವಾಗಿ ಬಿಎಲ್ಓ ಎಂದು ಪಟ್ಟ ನೀಡಿ ಈ ಅಕ್ರಮ ಮಾಡಲಾಗಿದೆ. ಸರ್ಕಾರಿ, ಅರೆ ಸರ್ಕಾರಿ, ಸರ್ಕಾರಿ ಶಿಕ್ಷಕರ ಹೊರತಾಗಿ ಬೇರೆಯವರಿಗೆ ಬಿಎಲ್ಓ ಆಗಿ ನೇಮಕ ಮಾಡಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಚುನಾವಣಾ ಆಯೋಗ ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ವಿಚಾರವಾಗಿ ದೇಶದೆಲ್ಲೆಡೆ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಈ ಹಗರಣವನ್ನು ಮುಚ್ಚಿಹಾಕಲು, ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ನೀಡಿದ್ದಾರೆ ಎಂದಷ್ಟೇ ನಾನು ಹೇಳಿದ್ದೇನೆ. ನಾನು ಯಾವುದೇ ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸಿಕೊಂಡಿಲ್ಲ’ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಪಾಕಿಸ್ತಾನ ಸಚಿವ ಪ್ರಧಾನಿ ಬಗ್ಗೆ ಹೇಳಿರುವ ಮಾತಿನ ಬಗ್ಗೆ ಕಾಂಗ್ರೆಸ್ ಮೌನ ವಹಿಸಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ರಾಷ್ಟ್ರ, ರಾಷ್ಟ್ರದ ಭದ್ರತೆ, ರಾಷ್ಟ್ರ ಮಟ್ಟದ ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ಪಕ್ಷ ಏನು ಹೇಳಬೇಕೋ ಅದನ್ನು ಹೇಳಿದೆ. ನಾನು ರಾಜ್ಯಕ್ಕೆ ಸೀಮಿತಿವಾಗಿದ್ದು, ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ’ ಎಂದರು.

Related posts