ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಮೇನಿಯಾ.. ಜ.16ರಂದು ‘ನಾ ನಾಯಕಿ’ ಸಮಾವೇಶ 

ಬೆಂಗಳೂರು: ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ಜನವರಿ 16ರಂದು ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅನ್ಯ ಪಕ್ಷಗಳ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಸೇರ್ಪಡೆ ಮಾಡಿಕೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ‘ಈ ದೇಶದಲ್ಲಿ ಬೆಲೆ ಏರಿಕೆ ದೊಡ್ಡ ಪಿಶಾಚಿಯಾಗಿ ದಿನನಿತ್ಯ ಜನರ ಬದುಕಿನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆ ಮೂಲಕ ಪ್ರತಿನಿತ್ಯ ಜನರ ಜೇಬು ಪಿಕ್ ಪಾಕೆಟ್ ಆಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮಾತ್ರವಲ್ಲ ದಿನಬಳಕೆ ವಸ್ತು ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗುತ್ತಿದೆ. ಬಿಜೆಪಿ ಸರ್ಕಾರ ಎಲ್ಲರ ಆದಾಯ ಡಬಲ್ ಮಾಡುತ್ತೇವೆ ಎಂದು ಮಾತು ನೀಡಿತ್ತು. ಆದರೆ ಯಾರ ಆದಾಯವೂ ಡಬಲ್ ಆಗಿಲ್ಲ. ಜನರಿಗೆ ಬೇರೆ ಆದಾಯವೂ ಇಲ್ಲವಾಗಿದೆ. ಆದರೆ ಜನಸಾಮಾನ್ಯರು ತಮ್ಮ ಜೀವನ ಸಾಗಿಸುವ ವೆಚ್ಚ ಡಬಲ್ ಆಗಿದೆ ಎಂದರು.

ಕೋವಿಡ್ ಸಮಯದಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸದಿಂದ ವಿಮುಖರಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 64 ಲಕ್ಷ ಮಕ್ಕಳಿಗೆ ಉತ್ತಮ ಆಹಾರ ಸಿಗದೆ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ 16 ವರ್ಷದೊಳಗಿನ 920 ಮಕ್ಕಳು ವಿದ್ಯಾಭ್ಯಾಸದಿಂದ ದೂರವಾಗಿದ್ದಾರೆ. ರಾಜ್ಯದಲ್ಲಿ 2470 ಮಂದಿ ನಿರುದ್ಯೋಗ, ಬಡತನ, ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದವರು ಹೇಳಿದರು.

ದಿನನಿತ್ಯ ಬಳಸುವ ಅಡುಗೆ ಎಣ್ಣೆ 95 ರೂ ನಿಂದ 220 ಆಗಿದೆ. ಅಡುಗೆ ಅನಿಲದ ಬೆಲೆ ಮಾತನಾಡುವಂತಿಲ್ಲ. ಹೀಗೆ ದಿನಸಿ ಸಾಮಾಗ್ರಿ ದುಪ್ಪಟ್ಟಾಗಿದೆ. ಜನರ ದಿನನಿತ್ಯದ ವೆಚ್ಚ ಈ ಹಿಂದೆಗಿಂತ ಶೇ.60ರಷ್ಟು ಹೆಚ್ಚಾಗಿದೆ. ಈ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂದು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಡಾ.ಪರಮೇಶ್ವರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸಿದ್ಧ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ನಾಡಿದ್ದಿನಿಂದ ನಾನು ಹಾಗೂ ಸಿದ್ದರಾಮಯ್ಯ ಅವರ ಯಾತ್ರೆ ಆರಂಭವಾಗುತ್ತಿದೆ. ಇದರ ಬಗ್ಗೆ ನಾಳೆ ವಿವರವಾದ ಮಾಹಿತಿ ನೀಡುತ್ತೇವೆ ಎಂದರು.

ರಾಜ್ಯ ಹಾಗೂ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅವರ ಬದುಕಿನಲ್ಲಿ ಕಾಂಗ್ರೆಸ್ ಪಕ್ಷ ಕೊಡುಗೆ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನಾಯಕತ್ವ, ಶಕ್ತಿ ನೀಡುತ್ತಾ ಬಂದಿದೆ. ಈ ಹಿಂದೆ ಅಂಗನವಾಡಿ ಕಾರ್ಯಕ್ರಮ, ಆಶಾಕಾರ್ಯಕರ್ತರು, ಸ್ತ್ರೀಶಕ್ತಿ ಸ್ವಸಹಾಯ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ಮಾತ್ರ ಮಾಡಿಕೊಂಡು ಬಂದಿದೆ ಎಂದ ಅವರು, ಚುನಾವಣೆಗೂ ಮುನ್ನ ಮಹಿಳೆಯರ ಸಬಲೀಕರಣಕ್ಕೆ ಮಹಿಳೆಯರಿಗೆ ನೀಡುವ ಭರವಸೆ ಬಿಡುಗಡೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಜ.15ರ ಒಳಗೆ ಎಲ್ಲ ಹೆಣ್ಣು ಮಕ್ಕಳು ಹಾಗೂ ನಾಯಕರುಗಳು ತಮ್ಮ ಸಲಹೆ ನೀಡಬಹುದು. ಮಹಿಳೆಯರ ಆಚಾರ, ವಿಚಾರ, ಅಭಿಪ್ರಾಯ ನಮ್ಮ ಧ್ವನಿ ಆಗಬೇಕು, ಮಹಿಳೆಯರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮಹಿಳೆಯರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಸಾರ್ವಜನಿಕರು, ಬೇರೆ ಪಕ್ಷದ ಮಹಿಳೆಯರು ಕೂ ಸಲಹೆ ನೀಡಬಹುದು. ಸಾಮಾಜಿಕ ಜಾಲತಾಣ, ಇಮೇಲ್, ವಾಟ್ಸಪ್ ಹಾಗೂ ಪತ್ರದ ಮೂಲಕ ತಮ್ಮ ಸಲಹೆ ನೀಡಬಹುದು ಎಂದರು.

ಇದೇ ವೇಳೆ, ಜ.16ರಂದು ಅರಮನೆ ಮೈದಾನದಲ್ಲಿ ಮಹಿಳೆಯರ ನಾ ನಾಯಕಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಈ ಸಮಾವೇಶದಲ್ಲಿ ಪಂಚಾಯ್ತಿ, ಸಹಕಾರ ಸಂಘಗಳಲ್ಲಿ ಸ್ಪರ್ಧೆ ಮಾಡಿದ ಮಹಿಳಾ ನಾಯಕಿಯರು ಭಾಗವಹಿಸುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಬೂತ್, ಪಂಚಾಯ್ತಿಗಳಿಂದ ಕನಿಷ್ಠ 3-10 ಹೆಣ್ಣು ಮಕ್ಕಳು ಈ ಸಮಾವೇಶಕ್ಕೆ ಆಗಮಿಸಬೇಕು ಎಂದು ಕರೆ ನೀಡುತ್ತಿದ್ದೇನೆ. ಹೆಣ್ಣು ಸಮಾಜದ ಕಣ್ಣು ಅವರು ಒಂದು ಶಕ್ತಿಯಾಗಿದ್ದು, ಅವರ ಸಬಲೀಕರಣಕ್ಕೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೇವೆ. ಈಗಾಗಲೇ ಸಾವಿರಾರು ಸಲಹೆಗಳು ಬಂದಿದ್ದು, ಇವುಗಳನ್ನು ಒಂದು ಸಮಿತಿ ಪರಿಶೀಲನೆ ನಡೆಸುತ್ತಿವೆ. ಈ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಮಿಸಲಿದ್ದಾರೆ. ಪ್ರಿಯಾಂಕಾ ಅವರು ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನೀಡುವ ಭರವಸೆಗಳನ್ನು ಘೋಷಣೆ ಮಾಡಲಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಪ್ರಿಯಾಂಕಾ ಗಾಂಧಿ ಅರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿ ಮಹಿಳೆಯರ ಧ್ವನಿಯಾಗಿ ಸಂದೇಶ ನೀಡುತ್ತಿದ್ದಾರೆ ಎಂದು ತಿಳಿಸಿದರು.

Related posts