ಮಾಧ್ಯಮಗಳನ್ನು ಹತ್ತಿಕ್ಕುವ ಆರೋಪ..? ಸರ್ಕಾರದ ನಡೆಗೆ ವಕೀಲರೂ ಆಕ್ರೋಶ..!

ಬೆಂಗಳೂರು: ಪರ್ಸಂಟೇಜ್ ಕರ್ಮಕಾಂಡ ಸೇರಿದಂತೆ ಹಲವಾರು ಹಗರಣಗಳ ಆರೋಪ ಕುರಿತಂತೆ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ದ ಟೀಕಾಸ್ತ್ರ ಪ್ರಯೋಗಿಸುತ್ತಿರುವಂತೆಯೇ, ಮತ್ತೊಂದೆಡೆ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುತ್ತಿರುವ ಮಾಧ್ಯಮಗಳನ್ನು ಹತ್ತಿಕ್ಕುವ ಆರೋಪಕ್ಕೂ ಬೊಮ್ಮಾಯಿ ಸರ್ಕಾರ ಗುರಿಯಾಗಿದೆ. ಶಿಕ್ಷಣ ಇಲಾಖೆಯ ಆಕ್ಷೇಪಾರ್ಹ ನಡೆ ಬಗ್ಗೆ ವರದಿ ಪ್ರಕಟಿಸಿರುವ ‘ದಿ ಫೈಲ್’ ಡಿಜಿಟಲ್ ಮೀಡಿಯಾಗೆ ಬೆಂಗಳೂರಿನ ಸೈಬರ್ ಕ್ರೈಂ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ ಎಂಬ ಬೆಳವಣಿಗೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಬಗ್ಗೆ ಬೊಮ್ಮಾಯಿ ಸರ್ಕಾರದ ವಿರುದ್ದ ಮಾಧ್ಯಮ ಕ್ಷೇತ್ರವಷ್ಟೇ ಅಲ್ಲ, ನ್ಯಾಯಾಂಗ ಕ್ಷೇತ್ರದ ಪ್ರಮುಖರೂ ಆಕ್ರೋಶ ಹೊರಹಾಕಿದ್ದಾರೆ.

ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹಾ ರೀತಿ ಅಧಿಕಾರ ಪ್ರಯೋಗಿಸಬಾರದೆಂದು ಹಿರಿಯ ನ್ಯಾಯವಾದಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಬೆಳವಣಿಗೆ ರಾಜ್ಯದ ಆಡಳಿತ ವ್ಯವಸ್ಥೆ ಯಾವ ಮಟ್ಟಕ್ಕಿಳಿದಿದೆ ಎಂಬುದನ್ನು ಅನಾವರಣ ಮಾಡಿದಂತಿದೆ.

ಶಿಕ್ಷಕರ ನೇಮಕಾತಿ ಅಕ್ರಮದ ಆರೋಪಕ್ಕೊಳಗಾಗಿರುವ, ಅಮಾನತಾಗಿರುವ ಮೂವರ ಸೇವೆಯನ್ನು ಮರುಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ‘ದಿ ಫೈಲ್’ ಸುದ್ದಿ ಜಾಲದಲ್ಲಿ ನ.10ರಂದು ತನಿಖಾ ವರದಿ ಪ್ರಕಟವಾಗಿತ್ತು. ಈ ವರದಿಯಲ್ಲಿ, ಇಲಾಖಾಧಿಕಾರಿಗಳು ಸಿದ್ದಪಡಿಸಿದ್ದ ಟಿಪ್ಪಣಿ ಪ್ರತಿಯೂ ಪ್ರಕಟವಾಗಿತ್ತು. ಸರ್ಕಾರದ ಕಾರ್ಯವೈಖರಿಯನ್ನು ರಾಜ್ಯದ ಜನತೆ ಪ್ರಶ್ನಿಸುವ ರೀತಿಯಂತಿದ್ದ ಈ ಅಕ್ರಮದ ಆರೋಪದಿಂದ ಬೊಮ್ಮಾಯಿ ಸರ್ಕಾರ ಗಲಿಬಿಲಿಗೊಂಡಿತ್ತು.

ಸರ್ಕಾರ ಸರಿಯಾಗಿಯೇ ಆಡಳಿತ ನಡೆಸಿದ್ದೇ ಆದಲ್ಲಿ ಅಕ್ರಮದ ಬಗ್ಗೆ ತನಿಖೆ ನಡೆಯಬೇಕಿತ್ತೇ ಹೊರತು ವರದಿ ಮಾಡಿದ ಮಾಧ್ಯಮದ ಮೇಲೆ ಅಧಿಕಾರ ಚಲಾಯಿಸುತ್ತಿರಲಿಲ್ಲವೋ ಏನೋ. ಆದರೆ ಈ ವಿಚಾರದಲ್ಲಿ ಸರ್ಕಾರದ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ನ್ಯಾಯಾಂಗ ಕ್ಷೇತ್ರದ ಪ್ರಮುಖರ ಅಭಿಪ್ರಾಯ.

ಈ ನಡುವೆ, ಈ ವರದಿ ಕುರಿತಂತೆ ಬೆಂಗಳೂರಿನ ಸೈಬರ್ ಅಪರಾಧ ಕೇಂದ್ರ ವಿಭಾಗದ ಪೊಲೀಸರು ‘ದಿ ಫೈಲ್’ ಮಾಧ್ಯಮಕ್ಕೆ ನೊಟೀಸ್ ಜಾರಿ ಮಾಡಿ, ಈ ಸುದ್ದಿಯ ಮೂಲ ಬಗ್ಗೆ ಮಾಹಿತಿ ಕೇಳಿದೆ. ಮಾಹಿತಿ ನೀಡಿದವರ ಹೆಸರು, ಫೋನ್ ನಂಬರ್, ಐಡಿ ಪ್ರೂಫ್, ವಿಳಾಸವನ್ನು ತನಿಖೆಗಾಗಿ ನೀಡುವಂತೆ ನೋಟೀಸ್‌ನಲ್ಲಿ ಕೋರಿರುವ ಬಗ್ಗೆ ‘ದಿ ಫೈಲ್’ ಮಾಧ್ಯಮ ಬೆಳಕು ಚೆಲ್ಲಿತ್ತು.

ಪೊಲೀಸರ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವಂತೆಯೇ, ಹಿರಿಯ ವಕೀಲರೂ ಆದ ಮಾಜಿ ಶಾಸಕ ರಮೇಶ್ ಬಾಬು ಅವರು ಸರ್ಕಾರಕ್ಕೆ ಬರೆದಿರುವ ಪತ್ರ ಸಂಚಲನ ಮೂಡಿಸಿದೆ. ಈ ಪತ್ರದಲ್ಲಿ ಅವರು ಸರ್ಕಾರ ಹಾಗೂ ಪೊಲೀಸರ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೂರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ‘ದಿ ಫೈಲ್’ ಮಾಧ್ಯಮವು ತನಿಖಾ ಪತ್ರಿಕೋದ್ಯಮ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಹಗರಣಗಳನ್ನು ಬಯಲಿಗೆಳೆದಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯಲ್ಲಿನ ಅಕ್ರಮವನ್ನೂ ಬಯಲು ಮಾಡಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮಾಧ್ಯಮಗಳಿಗೆ ಅದರದ್ದೇ ಆದ ಸ್ವಾತಂತ್ರ್ಯವಿದ್ದು, ಅದರಂತೆಯೇ ಮಾಧ್ಯಮವು ವರದಿ ಪ್ರಕಟಿಸಿದೆ ಎಂದು ರಮೇಶ್ ಬಾಬು ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ.

ಮಾಧ್ಯಮಗಳಿಗೆ ಅದರದ್ದೇ ಆದ ಸ್ವಾತಂತ್ರ್ಯ ಇರುವುದನ್ನು ಸರ್ವೋಚ್ಛ ನ್ಯಾಯಾಲಯ ಕೂಡಾ ಎತ್ತಿಹಿಡಿದಿದೆ. ಹಾಗಾಗಿ ಮಾಧ್ಯಮಗಳ ಸುದ್ದಿಯ ಮೂಲವನ್ನು ಪೊಲೀಸರು ಕೇಳುವುದು ಸರಿಯಾದ ನಡೆಯಲ್ಲ. ಹೀಗಿದ್ದರೂ ನ್ಯಾಯಾಲಯಗಳ ತೀರ್ಪುಗಳನ್ನು ಹಾಗೂ ಮಾರ್ಗಸೂಚಿಗಳನ್ನು ಮೀರಿ ತನಿಖಾ ಸಂಸ್ಥೆಗಳು ಮಾಧ್ಯಮದಿಂದಾಗಲೀ ಪತ್ರಕರ್ತರಿಂದಾಗಲೀ ಸುದ್ದಿಯ ಮೂಲವನ್ನು ಕೇಳಿರುವುದು ವಿಷಾದನೀಯ ಎಂದು ರಾಜಕೀಯ ವಿಶ್ಲೇಷಕರೂ ಆದ ರಮೇಶ್ ಬಾಬು ಅವರು ಪೊಲೀಸರ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘The File’ ಮಾಧ್ಯಮವು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸುದ್ದಿ ಬಗೆಗಿನ ಮಾಹಿತಿಯ ಮೂಲವನ್ನು ಕೇಳಲು ಬೆಂಗಳೂರು ಸೈಬರ್ ಕ್ರೈಂ, ಕೇಂದ್ರ ವಿಭಾಗದ ಪೊಲೀಸರು ನೊಟೀಸ್ ನೀಡಿ ಅಧಿಕಾರ ಪ್ರಯೋಗಿಸಿದ್ದಾರೆ. ಸುದ್ದಿಗೆ ಸಂಬಂಧಿಸಿದ ಮಾಹಿತಿದಾರರ ಹೆಸರು, ಫೋನ್ ನಂಬರ್, ಗುರುತಿನ ಚೀಟಿ, ವಿಳಾಸ ನೀಡುವಂತೆ ಪೊಲೀಸರು ನೊಟೀಸ್ ನೀಡಿದ್ದಾರೆ. ನೇಮಕಾತಿ ಅಕ್ರಮದ ಆರೋಪದಲ್ಲಿ ಅಮಾನತುಗೊಂಡಿರುವವರನ್ನು ಸೇವೆಗೆ ಮರುಸ್ಥಾಪಿಸುವ ಪ್ರಕ್ರಿಯೆ ಬಗ್ಗೆ ‘The File’ ಮಾಧ್ಯಮವು ವರದಿ ಮಾಡಿದೆಯೇ ಹೊರತು ರಕ್ಷಣಾ ಸೇವೆ ಅಥವಾ ದೇಶದ ಭದ್ರತೆಗೆ ಧಕ್ಕೆ ತರುವಂತಹಾ ಕೃತಿ ಮಾಡಿಲ್ಲ. ಹಾಗಾಗಿ ಮಾಧ್ಯಮಗಳ ವಿರುದ್ದ ಪೊಲೀಸರ ಇಂತಹ ನಡೆ ಆಕ್ಷೇಪಾರ್ಹ ಎಂಬುದನ್ನು ರಮೇಶ್ ಬಾಬು ಒತ್ತಿ ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕೇ ಹೊರತು ಮಾಧ್ಯಮದ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಹಾಗಾಗಿ ಮಾಧ್ಯಮಕ್ಕೆ ನೀಡಿರುವ ನೊಟೀಸನ್ನು ಹಿಂಪಡೆಯುವಂತೆ ಪೊಲೀಸರಿಗೆ ಸೂಚಿಸಬೇಕೆಂದು ರಮೇಶ್ ಬಾಬು ಅವರು ಮುಖ್ಯಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

Related posts