ಬೆಂಗಳೂರು: ಗ್ಲೋಕಲ್, ಅಮೃತ್ ಕಾಲ್ ಮುಂತಾದ ಹೊಸ ಪದಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಹಾದಿತಪ್ಪಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಹೇಳಿದ್ದು, ಉದ್ಯಮಿ ಅದಾನಿಗೆ ಸಂಬಂಧಿಸಿ ಪ್ರಧಾನಿಗೆ ಐದು ಪ್ರಶ್ನೆಗಳನ್ನು ಕೇಳಿ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬ್ರಿಜೇಶ್ ಕಾಳಪ್ಪ, “ಪ್ರಧಾನಿ ನರೇಂದ್ರ ಮೋದಿಯವರು ಗ್ಲೋಕಲ್ ಎಂಬ ವಿಚಾರವನ್ನು ಕೈಗೆತ್ತಿಕೊಂಡು ಘೋಷಣೆ ಮಾಡುತ್ತಿದ್ದಾರೆ. ಗ್ಲೋಬಲ್ ಹಾಗೂ ಲೋಕಲ್ ವಿಚಾರದಲ್ಲಿ ನಾವು ಹೇಗಿರಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಒಂದು ಶಬ್ದವನ್ನು ತೆಗೆದುಕೊಂಡು, ಅದನ್ನು ಇನ್ನೊಂದು ಶಬ್ದದೊಂದಿಗೆ ಜೋಡಿಸಿ ಹೊಸ ಶಬ್ದ ನಿರ್ಮಾಣ ಮಾಡಿ, ಜನರನ್ನು ಗೊಂದಲಗೊಳಿಸುವಂತೆ ಘೋಷಣೆ ಮಾಡುತ್ತಿರುತ್ತಾರೆ. ಇದರಿಂದ ಎಂಟು ವರ್ಷಗಳ ಕಾಲಾವಧಿಯಲ್ಲಿ ಜನರಿಗೆ ಹೇಗೆ ಸಹಾಯವಾಗಿದೆ ಎನ್ನುವುದು ಮುಖ್ಯವಾದ ವಿಚಾರ. ಈಗ ಗ್ಲೋಕಲ್, ಅಮೃತ್ ಕಾಲ್ ಬಜೆಟ್ ಮುಂತಾದ ಶಬ್ದಗಳನ್ನು ಬಳಸುತ್ತಿದ್ದಾರೆ. ಕೇವಲ ಶಬ್ದಗಳಲ್ಲಿ ಆಟವಾಡುವ ಬದಲು, ಇವುಗಳ ಅರ್ಥ ಏನೆಂದು ಅವರು ಜನರಿಗೆ ವಿವರವಾಗಿ ತಿಳಿಸಲಿ. ಇದರಿಂದ ಜನರಿಗೆ ಹೇಗೆ ಅನುಕೂಲವಾಗುತ್ತದೆ? ಜನರ ಜೀವನ ಹೇಗೆ ಸುಗಮವಾಗುತ್ತದೆ? ಎಂಬುದು ನಮಗೆ ತಿಳಿಯುತ್ತಿಲ್ಲ” ಎಂದು ಹೇಳಿದರು.
“ನಮ್ಮ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಪ್ರಧಾನಿ ಮೋದಿಯವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ, ಪ್ರಧಾನಿಯವರು ಹೆಚ್ಚಿನ ಸಂದರ್ಭದಲ್ಲಿ ಚುನಾವಣೆ ಇದ್ದಾಗಲೇ ಬರುತ್ತಾರೆ ಎಂದು ಹೇಳಿದ್ದರು. ಕಳೆದ ಚುನಾವಣೆ ವೇಳೆ ಬಂದಿದ್ದಾಗ 10% ಕಮಿಷನ್ ಎಂದು ಸಿದ್ದರಾಮಯ್ಯನವರನ್ನು ಲೇವಡಿ ಮಾಡಿ ಹೋಗಿದ್ದರು. ಈಗಿನದು 40% ಸರ್ಕಾರ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಇದರ ಬಗ್ಗೆ ಪ್ರಧಾನಿ ಮೋದಿಯವರಿಂದೇ ಒಂದೇ ಒಂದು ಸ್ಪಷ್ಟನೆ ಬಂದಿಲ್ಲ. ಅವರು ಯಾಕೆ 40% ಕಮಿಷನ್ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಅವರು ನಮ್ಮ ಹಾಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಅವರ ಮನಸ್ಸಿನಲ್ಲೇನಿದೆ ಎಂಬುದು ನಮಗೆ ಗೊತ್ತಿಲ್ಲ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
“ಅದಾನಿ ಕಂಪನಿಗೆ ಸಂಬಂಧಿಸಿ ಹಿಂಡನ್ಬರ್ಗ್ ರಿಪೋರ್ಟ್ ಬಂದಿದೆ. ಇದರ ನಂತರ ಅವರ ಕಂಪನಿಯ ಷೇರು ಕುಸಿಯುತ್ತಿದೆ. ಕಂಪನಿಗಳ ಷೇರುಗಳು ಏರುವುದು ಹಾಗೂ ಇಳಿಯುವುದು ಸಾಮಾನ್ಯ. ಆದರೆ ನೀವು ಸರ್ಕಾರಿ ಹಣವನ್ನು ಆ ಕಂಪನಿಗೆ ಹಾಕಿ, ಕಂಪನಿಗೆ ಆಸ್ಪದ ಮಾಡಿ ಕೊಡುವ ಅಗತ್ಯ ಏನಿತ್ತು? ಎಲ್ಐಸಿ ಎಂಬ ಸರ್ಕಾರಿ ಕಂಪನಿಯಿಂದ ಸುಮಾರು 86,000 ಕೋಟಿ ರೂ. ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿದೆ. ಎಸ್ಬಿಐ ಸಂಸ್ಥೆಯಿಂದ ಸುಮಾರು 1 ಲಕ್ಷ ಕೋಟಿ ರೂ. ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿದೆ. ಕರ್ನಾಟಕದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಎಸ್ಬಿಐ ಜೊತೆ 2017ರಲ್ಲಿ ವಿಲೀನವಾಗಿದೆ. ಅಂದರೆ, ಕನ್ನಡಿಗರ ದುಡ್ಡು ಎಸ್ಬಿಐನಲ್ಲಿದ್ದು, ಇದು ಇಂದು ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿದೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
“ಅದಾನಿ ಕಂಪನಿಯು ದಿನೇದಿನೇ ಕುಂಟುತ್ತಾ ಇದೆ. ಈ ಸಂದರ್ಭದಲ್ಲಿ ನಾವು ಪ್ರಧಾನಿ ಮೋದಿಯವರಿಗೆ ಕೆಲವು ಪ್ರಶ್ನೆಗಳನ್ನು ಕೇಳ ಬಯಸುತ್ತೇವೆ. 2015ರ ಮೇ ತಿಂಗಳಿನಲ್ಲಿ ತಾವು ಗೌತಮ್ ಅದಾನಿ ಜೊತೆ ಚೀನಾಗೆ ಹೋಗಿದ್ದ ವೇಳೆ ನಡೆದ 26 ಒಪ್ಪಂದಗಳಲ್ಲಿ 22 ಬಿಲಿಯನ್ ಡಾಲರ್ ಮೊತ್ತದ ಸಿಂಹಪಾಲು ಅದಾನಿಯವರಿಗೆ ಬಂದಿದೆಯೋ ಇಲ್ಲವೋ? ಮೋದಿಯವರು 2014 ಹಾಗೂ 2019ರ ಚುನಾವಣೆಯಲ್ಲಿ ಹೆಚ್ಚಾಗಿ ಓಡಾಡಿದ್ದು ಅದಾನಿಯವರ ಏರ್ಕ್ರಾಫ್ಟ್ಗಳಲ್ಲಿ ಹೌದೋ ಅಲ್ಲವೋ? ಆಸ್ಟ್ರೇಲಿಯಾ ಪ್ರಧಾನಿ ಜೊತೆ ಕಾರ್ಮೈಕಲ್ ಮೈನಿಂಗ್ ಕಂಪನಿಗೆ ಲಾಭ ಮಾಡಿಕೊಡಲು ಪ್ರಧಾನಿ ಮೋದಿ ಮಾತನಾಡಿದ್ದು ಸತ್ಯವೋ ಸುಳ್ಳೋ? ಮಂಗೋಲಿಯಾಗೆ 2020ರಲ್ಲಿ ಮೋದಿಯವರು ಹೋದಾಗ ಅಲ್ಲಿನ ಪ್ರಧಾನಿಗೆ ಅದಾನಿಯವರನ್ನು ಮೋದಿಯವರು ಪರಿಚಯ ಮಾಡಿಸಿಕೊಟ್ಟಿದ್ದು ನಿಜವೋ ಸುಳ್ಳೋ? ಯಾವುದಾದರೂ ಒಂದು ಭಾರತೀಯ ಕಂಪನಿ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂದರ್ಭದಲ್ಲಿ ಆ ದೇಶದಿಂದಲೇ ಸಹಾಯ ಪಡೆಯುತ್ತದೆಯೇ ಹೊರತು ನಮ್ಮ ದೇಶದಿಂದ ಪಡೆಯುವುದಿಲ್ಲ. ಆದರೆ ಕಾರ್ಮೈಕಲ್ ಪ್ರಾಜೆಕ್ಟ್ಗೆ ಅದಾನಿಯವರು ಎಸ್ಬಿಐನಿಂದ 10,000 ಕೋಟಿ ರೂ. ಸಹಾಯಧನ ಪಡೆದಿದ್ದು ನಿಜವೋ ಸುಳ್ಳೋ? ಅಲ್ಲಿನ ಲೋಕಲ್ ಬ್ಯಾಂಕ್ಗಳು ಏಕೆ ಸಹಾಯ ಮಾಡಿಲ್ಲ ಎಂಬ ವಿಚಾರ ಕೂಡ ಕಾಡುತ್ತಿದೆ. ಈ ಐದು ಪ್ರಶ್ನೆಗಳನ್ನು ಬೆಂಗಳೂರಿಗೆ ಬಂದಿರುವ ಮೋದಿಯವರಿಗೆ ಕೇಳಲು ಬಯಸುತ್ತೇನೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
“ಪ್ರಧಾನಿ ಮೋದಿಯವರು ಈ ತಿಂಗಳು ಮೂರನೇ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ರಸ್ತೆ ಗುಂಡಿಗಳಿಂದ ಐವತ್ತು ಜನ ಮೃತಪಟ್ಟಿರುವಾಗ ಬನ್ನಿ ಎಂದು ಕರೆದಾಗ ಮೋದಿ ಬರಲಿಲ್ಲ. ಕಾವೇರಿ, ಮೇಕೆದಾಟು ವಿಚಾರದಲ್ಲಿ ಕುಡಿಯಲು ನೀರಿಲ್ಲ ಎಂದಾಗಲೂ ಬರಲಿಲ್ಲ. ಕೃಷ್ಣಾ ನದಿ ವಿಚಾರದಲ್ಲಿ ಅಂತಿಮ ನೋಟಿಫಿಕೇಷನ್ ಮಾಡಿ ಎಂದು ಕೇಳಿದಾಗಲೂ ಬರಲಿಲ್ಲ. ಮಹದಾಯಿ ವಿಚಾರಕ್ಕೂ ಬರಲಿಲ್ಲ, ಬೆಳಗಾವಿ ವಿಚಾರದಲ್ಲಿ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಸಂಭವಿಸಿದಾಗಲೂ ಬರಲಿಲ್ಲ. ಬಿಜೆಪಿಯ 26 ಸಂಸದರು ಕೂಡ ಬರಲಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಮೋದಿಯವರು ಹಾಜರಿರುತ್ತಾರೆ. ಆದ್ದರಿಂದ ನಾವು ಮೇಲಿನ ಪ್ರಶ್ನೆಗಳನ್ನು ಕೇಳಿದ್ದೇವೆ. ಇದಕ್ಕೆ ಪ್ರಧಾನಿಯವರು ಉತ್ತರ ನೀಡಲಿ. ಇಲ್ಲದಿದ್ದರೆ ಇದು ಗ್ಲೋಕಲ್ ಅಲ್ಲ, ಕರ್ನಾಟಕ ಜನತೆಯ ಗೋತಾ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಉಷಾ ಮೋಹನ್ ಹಾಗೂ ರಾಜೇಂದ್ರ ಉಪಸ್ಥಿತರಿದ್ದರು.