ಸಾಲ ಮನ್ನಾ ಮಾಡಿ ಎಂದು ಕೇಳಿದ್ದಕ್ಕೆ ‘ನಮ್ಮತ್ರ ನೋಟ್‌ ಪ್ರಿಂಟ್‌ ಮಾಡುವ ಮಿಷನ್‌ ಇಲ್ಲ’ ಎಂದಿದ್ದ ಬಿಎಸ್‌ವೈ

ಕಲಬುರಗಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದ್ದಕ್ಕೆ ನಮ್ಮತ್ರ ನೋಟ್‌ ಪ್ರಿಂಟ್‌ ಮಾಡುವ ಮಿಷನ್‌ ಇಲ್ಲ ಎಂದು ಉತ್ತರ ನೀಡಿದ್ದರು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೆನಪಿಸಿದ್ದಾರೆ.

ಕಲಬುರಗಿ ಗ್ರಾಮೀಣ ಭಾಗದ ಕಮಲಾಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ  ಸಿದ್ದರಾಮಯ್ಯ, ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ಅವರ ಸರ್ಕಾರ ಇದ್ದಾಗ 72,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ರು. ನಾನು ಮುಖ್ಯಮಂತ್ರಿಯಾಗಿರುವಾಗ ರಾಜ್ಯದ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50,000 ವರೆಗಿನ 8,165 ಕೋಟಿ ಸಾಲ ಮನ್ನಾ ಮಾಡಿದ್ದೆ. ನಮ್ಮ ಪಕ್ಷದ ಉಗ್ರಪ್ಪನವರು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದ್ದಕ್ಕೆ ನಮ್ಮತ್ರ ನೋಟ್‌ ಪ್ರಿಂಟ್‌ ಮಾಡುವ ಮಿಷನ್‌ ಇಲ್ಲ ಎಂದು ಉತ್ತರ ನೀಡಿದ್ದರು. ನಮ್ಮತ್ರ ಮಿಷನ್‌ ಇತ್ತಾ, ನಾವು ಸಾಲ ಮನ್ನಾ ಮಾಡಿಲ್ವಾ? ಇದೇ ಬಿಜೆಪಿಯವರ ರೈತಕಾಳಜಿ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ನ ಖಾವೂಂಗಾ ನ ಖಾನೆದೂಂಗ ಎನ್ನುವ ನರೇಂದ್ರ ಮೋದಿ ಅವರು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರ ಪತ್ರದ ಮೇಲೆ ಏನಾದರೂ ಕ್ರಮ ಕೈಗೊಂಡ್ರಾ? ಇಲ್ಲ. ಇದರ ಪರಿಣಾಮವಾಗಿ ಬೆಳಗಾವಿಯ ಸಂತೋಷ್‌ ಪಾಟೀಲ್‌ 40% ಕಮಿಷನ್‌ ಹಣ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡ. ಆತ ಡೆತ್‌ ನೋಟ್‌ ನಲ್ಲಿ ಈಶ್ವರಪ್ಪ ಅವರೇ ತನ್ನ ಸಾವಿಗೆ ಕಾರಣ ಎಂದು ಬರೆದಿಟ್ಟು ಸತ್ತರೂ, ಬೊಮ್ಮಾಯಿಯವರು ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಾರೆ. ಪ್ರದೀಪ್‌ ಎನ್ನುವ ವ್ಯಕ್ತಿ ತನ್ನ ಸಾವಿಗೆ ಅರವಿಂದ ಲಿಂಬಾವಳಿ ಕಾರಣ ಎಂದು ಡೆತ್‌ ನೋಟ್‌ ಬರೆದಿಟ್ಟು ಸತ್ತು ಹೋದರು, ಶಿವಕುಮಾರ್‌ ಎಂಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಇಂಥಾ ಸರ್ಕಾರ ಹಿಂದೆಂದಾದರೂ ಕರ್ನಾಟಕದಲ್ಲಿ ಬಂದಿತ್ತಾ? ಮೋದಿ ಅವರು ಹೇಳಿದ್ದ ಕಪ್ಪು ಹಣ ಹೊರಬಂದು, ನಿಮ್ಮೆಲ್ಲರ ಅಕೌಂಟಿಗೆ 15 ಲಕ್ಷ ದುಡ್ಡು ಬಂತಾ? ಇಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ಭಾರತ ದೇಶ ಎಂದೂ ಕಂಡಿರಲಿಲ್ಲ. ನೀವು ಬಿಜೆಪಿಯವರನ್ನು ನಂಬಿ ಮೋಸ ಹೋಗಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇವೆ ಎಂದವರು ಭರವಸೆ ನೀಡಿದರು.

Related posts