ಬೆಂಗಳೂರು: ಕಾರ್ಮಿಕರ ಇಲಾಖೆಯಲ್ಲಿ 7-8 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕೆಪಿಸಿಸಿ ಮಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬ, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಬಾಬು, ಇತ್ತೀಚೆಗೆ ಕಾಕಂಬಿಗೆ ಸಂಬಂಧಿಸಿದಂತೆ 250 ಕೋಟಿ ರೂಪಾಯಿ ಹಗರಣವನ್ನು ಕಾಂಗ್ರೆಸ್ ದಾಖಲೆ ಸಮೇತವಾಗಿ ಬಹಿರಂಗ ಪಡಿಸಿತ್ತು. ಇದೀಗ ಕಾರ್ಮಿಕ ಇಲಾಖೆಯಲ್ಲಿ ಆಗಿರುವ 250 ಕೋಟಿ ರೂಪಾಯಿ ಮೌಲ್ಯದ ಕಿಟ್ ಗಳ ಹಗರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಾರ್ಮಿಕರ ಇಲಾಖೆಯಲ್ಲಿ 7-8 ಸಾವಿರ ಕೋಟಿ ಅವ್ಯವಹಾರ ನಡೆದಿದ್ದು, ಅದರ ಮೊದಲ ಭಾಗ ಈ ಹಗರಣವಾಗಿದೆ. ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ದಾಖಲೆ ಕೇಳುತ್ತಾರೆ. ಹಾಗಾಗಿ ದಾಖಲೆ ಸಮೇತ ಎಲ್ಲಾ ವಿಚಾರ ಬಹಿರಂಗ ಪಡಿಸಿದ್ದೇವೆ ಎಂದರು.
ಕಾರ್ಮಿಕ ಇಲಾಖೆಯಿಂದ ಯಾವ ಕಿಟ್ ನೀಡಲಾಗುತ್ತಿದೆ. ಅವುಗಳ ಮೌಲ್ಯ ಏನು? ಇಲಾಖೆ ವತಿಯಿಂದ ಈ ಕಿಟ್ ಗಳಿಗೆ ಎಷ್ಟು ದರ ನಿಗದಿ ಮಾಡಿದ್ದಾರೆ ಎಂಬ ಬಗ್ಗೆ ದಾಖಲೆ ಬಹಿರಂಗಡಿಸಿದ ರಮೇಶ್ ಬಾಬು, 1996ರಲ್ಲಿ ಕರ್ನಾಟಕ ಕಟ್ಟಡ ಹಾಗೂ ಇತರ ಕಾರ್ಮಿಕರ ಕಾಯ್ದೆ ಜಾರಿ ಮಾಡಿದ್ದು, ಶೇ.1ರಷ್ಟು ಸುಂಕ ಸಂಗ್ರಹಿಸಲು ಆರಂಭಿಸಲಾಯಿತು. 2006ರಲ್ಲಿ ಇದಕ್ಕೆ ನಿಯಮಾವಳಿ ರೂಪಿಸಿ ಸುಂಕದ ರೂಪದಲ್ಲಿ ಸಂಗ್ರಹಿಸಿರುವ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಹೇಗೆ ವಿನಿಯೋಗಿಸಬೇಕು ಎಂದು ಸರ್ಕಾರ ನಿಯಮಾವಳಿ ರೂಪಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸೆಸ್ ಅನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕೆ ಮಾತ್ರ ವಿನಿಯೋಗಿಸಬೇಕು. ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಸುಮಾರು 2500 ಕೋಟಿ ವಾರ್ಷಿಕವಾಗಿ ಸೆಸ್ ಸಂಗ್ರಹವಾಗುತ್ತದೆ. ಇನ್ನು ಈ ಇಲಾಖೆ ಇಟ್ಟಿರುವ ಠೇವಣಿಗೆ ಬಡ್ಡಿಯೇ ವಾರ್ಷಿಕ 350 ಕೋಟಿ ಸಿಗುತ್ತಿದೆ ಎಂದರು.
2020-21, 2021-22ರಲ್ಲಿ ಕಾರ್ಮಿಕರ ಉಪಯೋಗಕ್ಕಾಗಿ ಕಿಟ್ ವಿತರಣೆ ನೀಡುವ ಯೋಜನೆ ರೂಪಿಸುತ್ತಾರೆ. ಇದರ ಭಾಗವಾಗಿ 2.67,556 ಕಿಟ್ ನೀಡಿದ್ದಾರೆ. ರಾಜ್ಯದಲ್ಲಿ ಐದು ವಿಭಾಗವಾಗಿ ಮಾಡಿ ಕಿಟ್ ಹಂಚಿದ್ದಾರೆ. 2020-21ನೇ ಸಾಲಿನಲ್ಲಿ 6 ಕಿಟ್ ನೀಡಲು ನಿರ್ಧರಿಸುತ್ತಾರೆ. 5625 ಬಾರ್ ಬೆಂಡಿಂಗ್ ಕಿಟ್, 5600 ಕಾರ್ಪೆಂಟರಿ, 4625 ಎಲೆಕ್ಟ್ರೀಷಿಯನ್, 8605 ಪೇಂಟಿಂಗ್, 5203 ಪ್ಲಂಬಿಂಗ್, 96,000 ಮೆಷನರಿ ಕಿಟ್ ನೀಡಲು ನಿರ್ಧರಿಸುತ್ತಾರೆ. ಒಟ್ಟು 49.94 ಕೋಟಿ ಹಣ ವಿನಿಯೋಗ ಮಾಡಿರುತ್ತಾರೆ. ನಂತರ 2021-22ನೇ ಸಾಲಿನಲ್ಲಿ ಈ ಐದು ವಿಭಾಗಗಳಲ್ಲಿ 2,67,556 ಟೂಲ್ ಕಿಟ್ ಖರೀದಿ ಮಾಡಿದ್ದು ಇದಕ್ಕೆ 133 ಕೋಟಿ ಹಣ ವಿನಿಯೋಗ ಮಾಡಿದೆ ಎಂದವರು ಹೇಳಿದರು.
ನಂತರ 2022-23ನೇ ಸಾಲಿನಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳಿಗೆ 1-5ನೇ ಹಂತದ ಮಕ್ಕಳಿಗೆ ಒಂದು ಟೂಲ್ ಕಿಟ್ 6-8ನೇ ತರಗತಿ ಮಕ್ಕಳಿಗೆ ಮತ್ತೊಂದು ಕಿಟ್ ನೀಡಿದ್ದಾರೆ. 1-5ನೇ ತರಗತಿ ಮಕ್ಕಳಿಗೆ ನೀಡಿರುವ ಟೂಲ್ ಕಿಟ್ ನಲ್ಲಿ 35 ಸಾಮಾಗ್ರಿಗಳನ್ನು ನೀಡಿದ್ದು, ಒಂದೊಂದು ವಿಭಾಗದಲ್ಲೂ ಈ ಕಿಟ್ ಮೌಲ್ಯ ಬೇರೆ ಬೇರೆ ಇದೆ. 1-5ನೇ ತರಗತಿ ಮಕ್ಕಳ ಕಿಟ್ ಗೆ 38.47 ಕೋಟಿ ಹಣ ನೀಡಿದೆ. 6-8ನೇ ತರಗತಿ ಕಿಟ್ ಗೆ 27.80 ಕೋಟಿ ಹಣ ನೀಡಿದೆ. ಒಟ್ಟು 250 ಕೋಟಿ ಹಣವನ್ನು ಕಿಟ್ ಗಳಿಗೆ ವಿನಿಯೋಗಿಸಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.
ಮಾರುಕಟ್ಟೆಯಲ್ಲಿ ಒಂದು ಪೆನ್ಸಿಲ್ ಬಾಕ್ಸ್ ಮೌಲ್ಯ 100 ರೂ. ಇದ್ದರೆ, ಇವರು 200 ರೂ. ಹಾಕಿದ್ದಾರೆ. ಇವರು ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಕಿಟ್ ಮೌಲ್ಯ 3650 ರೂ. ಆಗಿದೆ. ಆದರೆ ಇವರು 7300ರಿಂದ 9000ದ ವರೆಗೆ ದಾಖಲು ಮಾಡಿದ್ದಾರೆ. ಇನ್ನು ಉಳಿದ ಎಲೆಕ್ಟ್ರಿಟಿಷಿಯನ್ ಉಪಕರಣ 6904 ರೂ. ನಿಗದಿ ಮಾಡಿದ್ದು, ಇದರಲ್ಲಿ ಇರುವ ವಸ್ತುಗಳ ಬೆಲೆ 2960 ರೂ ಮೌಲ್ಯದ್ದಾಗಿದೆ. ಮಕ್ಕಳು ಹಾಗೂ ಕಾರ್ಮಿಕರಿಗೆ ನೀಡಿರುವ ಕಿಟ್ ಗಳಲ್ಲೂ ಇವರು ಅಕ್ರಮ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ದಾಖಲೆ ಕೇಳುವ ಸಿಎಂ ಬೊಮ್ಮಾಯಿ ಅವರು ಸಮಯಾವಕಾಶ ಕೊಟ್ಟರೆ ಈ ದಾಖಲೆಗಳನ್ನು ಅವರ ಕಚೇರಿ, ನಿವಾಸಕ್ಕೆ ಹೋಗಿ ನೀಡಲು ಸಿದ್ಧವಿದ್ದೇವೆ. ಈ ಕಿಟೆ ದರ ಎಷ್ಟಿದೆ, ಇಲ್ಲಿ ಕಮಿಷನ್ ಎಷ್ಟು ಪಡೆಯಲಾಗಿದೆ ಎಂದು ಅವರೇ ಪರಿಶೀಲಿಸಿ ಹೇಳಲಿ ಎಂದ ರಮೇಶ್ ಬಾಬು, ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಲಿ ಎಂದರು.