ಬೆಂಗಳೂರು: ನುಡಿದಂತೆ ನಡೆಯದ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತೆಯರು ರೊಚ್ಚಿಗೆದ್ದಿದ್ದಾರೆ. ಸರ್ಕಾರದ ವಿರುದ್ದ ಮತ್ತೆ ಹೋರಾಟ ಕೈಗೊಂಡಿದ್ದಾರೆ. BBMP ಆಶಾ ಕಾರ್ಯಕರ್ತೆಯರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯ ಹಾದಿ ಹಿಡಿದಿರುವುದು ಸರ್ಕಾರಕ್ಕೂ ಸವಾಲೆಂಬಂತಾಗಿದೆ.
ಶುಕ್ರವಾರದಿಂದ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಆಶಾ ಕಾರ್ಯಕರ್ತೆಯರು ಮುಷ್ಕರದಲ್ಲಿ ತೊಡಗಿದ್ದು ಎರಡನೇ ದಿನವಾದ ಇಂದೂ ಈ ಹೋರಾಟ ಮುಂದುವರಿದಿದೆ. ಇದೇ ಸಂದರ್ಭದಲ್ಲಿ ಕೆಲವರಿಗೆ ಭಾಗಶಃ ಗೌರವ ಧನ ಪಾವತಿಯಾಗಿದೆಯಾದರೂ ನ್ಯಾಯಯುತವಾಗಿ ಬರಬೇಕಾದ ಹಣ ಸಂದಾಯವಾಗುವವರೆಗೂ ಈ ಹೋರಾಟವನ್ನು ಮುಂದುವರಿಸಲಾಗುವುದು ಎಂದು AIUTUC ಮುಖಂಡ ಶ್ರೀಕಾಂತ್ ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಕೇಂದ್ರದ ಪ್ರೋತ್ಸಾಹ ಧನ ಬಿಡುಗಡೆಯಾಗದೆ ಆಶಾ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಮೂರು ತಿಂಗಳ ನಿಗದಿತ ಗೌರವ ಧನ ಸಹ ಬಾಕಿ ಉಳಿದಿದ್ದಾಗ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆನಂತರ ಗೌರವಧನ ಬಿಡುಗಡೆಯಾಯಿತು. ಈಗ ಕೇಂದ್ರದ ಪ್ರೋತ್ಸಾಹ ಧನಕ್ಕೂ ಬೀದಿಗಿಳಿದು ಪ್ರತಿಭಟಿಸಬೇಕಾದ ಪರಿಸ್ಥಿತಿಯನ್ನು ಬಿಬಿಎಂಪಿ ಸೃಷ್ಟಿಸಿರುವುದು ಶೋಚನೀಯ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ.
ಫೆಬ್ರವರಿ 28ರಂದು ಬಿಬಿಎಂಪಿಯ ವಿಶೇಷ ಆಯುಕ್ತರನ್ನು ಆಶಾ ಕಾರ್ಯಕರ್ತೆಯರ ನಿಯೋಗ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದಾಗ ಇನ್ನು ಎರಡು ಮೂರು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಭರವಸೆ ದೊರೆತ ಹಿನ್ನೆಲೆಯಲ್ಲಿ ಇಷ್ಟು ದಿನ ತಾಳ್ಮೆಯಿಂದ ಕಾದಿದ್ದೇವೆ. ಇನ್ನು ತಾಳುವುದು ಕಷ್ಟವಾದ್ದರಿಂದ ಎಲ್ಲಾ ಆಶ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC ) ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಿ ಬಾಕಿ ಉಳಿದಿರುವ ಪ್ರೋತ್ಸಾಹ ಧನ ಬಿಡುಗಡೆಯಾಗುವ ತನಕ ಅಂದರೆ ಮಾರ್ಚ್10ರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಮುಖಂಡರು ಘೋಷಿಸಿದ್ದರು. ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆಯಾಗುವ ತನಕ ಆರೋಗ್ಯ ಇಲಾಖೆ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು AIUTUC ಮುಖಂಡ ಶ್ರೀಕಾಂತ್ ತಿಳಿಸಿದ್ದಾರೆ.