ಬೆಂಗಳೂರು: ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತ ಸಮುದಾಯ ಸುದೀರ್ಘ ಹೋರಾಟ ನಡೆಸಿದ್ದು ಚುನಾವಣೆಯ ಹೊಸ್ತಿಲಲ್ಲಿ ರಾಜ್ಯ ಬಿಜೆಪಿ ಸರ್ಕಾರ ಈ ಹೋರಾಟಕ್ಕೆ ಶರಣಾಗಿದೆ. ಮಹತ್ವದ ನಿರ್ಧಾರದಲ್ಲಿ ಬಸವರಾಜ್ ಬೊಮ್ಮಾಯಿ ಸರ್ಕಾರ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಡಿ ಮೀಸಲಾತಿ ಕಲ್ಪಿಸಲು ತೀರ್ಮಾನಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಬಗ್ಗೆ ಪಂಚಮಸಾಲಿ ಹೋರಾಟಗಾರರು ತಕ್ಷಣದ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ರಾಜ್ಯ ಸರ್ಕಾರದ ಮೀಸಲಾತಿ ನಿರ್ಧಾರ ತಮ್ಮ ಸಮುದಾಯಕ್ಕೆ ಆಶಾದಾಯವಲ್ಲ ಎಂದಿರುವ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಈ ಬಗ್ಗೆ ಶನಿವಾರ ಬೆಳಿಗ್ಗೆ ಸಮುದಾಯದ ಪ್ರಮುಖರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಾವು ಕೇಳಿರುವುದು 2ಎ ಮೀಸಲಾತಿ. ಆದರೆ ಸರ್ಕಾರ ಕೊಡುತ್ತಿರುವುದು 2ಡಿ ಮೀಸಲಾತಿ. ಈ ಬಗ್ಗೆ ಅಸಮಾಧಾನವಿದ್ದು ಶನಿವಾರ ಬೆಳಿಗ್ಗೆ ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟನಿರತ ಪ್ರಮುಖರ ಜೊತೆ ಚರ್ಚಿಸಲಾಗುವುದು. ಸರ್ಕಾರದ ಕ್ರಮವನ್ನು ಸ್ವಾಗತಿಸಬೇಕಾ ಅಥವಾ ವಿರೋಧಿಸಬೇಕಾ ಎಂಬ ಬಗ್ಗೆ ಶನಿವಾರದ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿರುವ ಶ್ರೀಗಳು, ಆವರೆಗೂ ನಮ್ಮ ಸಮುದಾಯದವರು ವಿಜಯೋತ್ಸವ ಆಚರಿಸುವುದಿಲ್ಲ ಎಂದು ತಿಳಿಸಿದ್ದಾರೆ.